ಜಿಲ್ಲೆಯಲ್ಲಿ ಹೇಗಿರಲಿದೆ ‘ಆಕ್ರೋಶ ದಿನ’ ಆಚರಣೆ?
ಮಂಗಳೂರು, ನ. 27: ನೋಟು ಅಮಾನ್ಯಗೊಳಿಸಿದ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ಹಾಗೂ ನೋಟುಗಳಮೇಲಿನ ನಿಷೇಧವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ವಿಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳು ನ.28ರಂದು ಕರೆ ಕೊಟ್ಟಿರುವ ‘ಆಕ್ರೋಶ ದಿನ’ ಆಚರಣೆಯ ಸಂದರ್ಭದಲ್ಲಿ ದ.ಕ. ಜಿಲ್ಲೆಯ ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್ಸುಗಳು ಹಾಗೂ ಆಟೋ ರಿಕ್ಷಾಗಳು ಎಂದಿನಂತೆ ಸಂಚಾರ ನಡೆಸಲಿದೆ ಎಂದು ಆಯಾ ಸಂಘಟನೆಗಳು ಸ್ಪಷ್ಟಪಡಿಸಿವೆ.
ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ
ಆಕ್ರೋಶ ದಿನ ಆಚರಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಇರುವುದಿಲ್ಲ ಎಂದು ದ.ಕ. ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಕೆಎಸ್ಸಾರ್ಟಿಸಿ ಬಸ್ ಬಂದ್ ಇಲ್ಲ
ಕೆಎಸ್ಸಾರ್ಟಿಸಿ ಬಸ್‌ಗಳು ಎಂದಿನಂತೆ ಬೆಳಗ್ಗೆಯಿಂದ ಓಡಾಟ ಪ್ರಾರಂಭಿಸಲಿದೆ. ಕೆಎಸ್ಸಾರ್ಟಿಸಿ ಬಸ್‌ಗಳ ಎಲ್ಲಾ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಲಿದ್ದು, ಮಂಗಳೂರು ಕೆಎಸ್ಸಾರ್ಟಿಸಿ ನಿಲ್ದಾಣದಿಂದ ಎಲ್ಲಾ ಬಸ್ಸುಗಳು ಸಂಚರಿಸಲಿದೆ ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ ತಿಳಿಸಿದ್ದಾರೆ.
ಸಿಟಿ ಬಸ್ ಬಂದ್ ಇಲ್ಲ
ದ.ಕ. ಜಿಲ್ಲೆಯ ಸಿಟಿ ಬಸ್‌ಗಳ ಸಂಚಾರ ನಿಲ್ಲಿಸುವುದಿಲ್ಲ. ವಿದ್ಯಾರ್ಥಿಗಳು, ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಎಂದಿನಂತೆ ಸಿಟಿ ಬಸ್‌ಗಳು ಓಡಾಟ ನಡೆಸಲಿದೆ. ಒಂದು ವೇಳೆ ಸಂಚಾರಕ್ಕೆ ಅಡಚರಣೆ ಉಂಟಾದರೆ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸಂಚಾರವನ್ನು ಸ್ಥಗಿತಗೊಳಿಸುವುದಾಗಿಯೂ ಎಂದು ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಜೀಝ್ ಪರ್ತಿಪಾಡಿ ತಿಳಿಸಿದ್ದಾರೆ.
ಅಟೋ ರಿಕ್ಷಾಗಳು ಬಂದ್ ಇಲ್ಲ
ನ.28ರ ಆಕ್ರೋಶ ದಿನಾಚರಣೆಗೆ ಆಟೋ ರಿಕ್ಷಾ ಚಾಲಕರ ಬೆಂಬಲ ಇದ್ದು, ಆದರೆ, ನಗರದ ಆಟೊ ರಿಕ್ಷಾಗಳು ಎಂದಿನಂತೆ ಕಾರ್ಯಾಚರಿಸಲಿದೆ ಎಂದು ಫೆಡರೇಶನ್ ಕರ್ನಾಟಕ ಆಟೋ ರಿಕ್ಷಾ ಚಾಲಕರ ಯೂನಿಯನ್‌ನ ನಗರಾಧ್ಯಕ್ಷ ಲಿಂಗಪ್ಪ ನಂತೂರು ತಿಳಿಸಿದ್ದಾರೆ.
ಪ್ರತಿಭಟಿಸಿ ಡಿಸಿಗೆ ಮನವಿ: ಕೋಡಿಜಾಲ್
ಕೇಂದ್ರದ ನೋಟು ರದ್ದತಿಯ ವಿರುದ್ಧ ಸೆ.28ರಂದು ಆಕ್ರೋಶ ದಿನಾಚರಣೆಯನ್ನು ಆಚರಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ತಿಳಿಸಿದ್ದಾರೆ. ಅಂದು ಬೆಳಗ್ಗೆ 10:30ಕ್ಕೆ ಕಾಂಗ್ರೆಸ್ ವತಿಯಿಂದ ನಗರದ ಪುರಭವನ ಎದುರಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
‘ಆಕ್ರೋಶ ದಿನ’ವಲ್ಲ; ಸಂತಸದ ದಿನ: ಮಟ್ಟಾರು
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಶೇ. 40ರಷ್ಟು ಕೂಡಿಟ್ಟಿದ್ದ ಕಪ್ಪು ಹಣವನ್ನು ಹೊರಬರಲು ಪ್ರಯತ್ನ ಮಾಡಿದ್ದಾರೆ. ಮೋದಿಯವರ ಈ ಕ್ರಮವನ್ನು ದೇಶದ ಜನತೆ ಶ್ಲಾಘಿಸಿದೆ. ಕೇಂದ್ರದ ಈ ಕ್ರಮದಿಂದ ಬಡವರು, ಮಧ್ಯಮ ವರ್ಗದವರು ಅಥವಾ ಶ್ರೀಮಂತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ಕಪ್ಪು ಹಣ ಇಟ್ಟುಕೊಂಡವರಿಗೆ, ತೆರಿಗೆ ವಂಚಕರಿಗೆ ತೊಂದರೆಯಾಗಿರಬಹುದು. ಕೇಂದ್ರದ ಈ ಕ್ರಮವನ್ನು ‘ಆಕ್ರೋಶ ದಿನ’ದ ಬದಲು ಸಂತಸದ ದಿನವನ್ನಾಗಿ ಆಚರಿಸಬೇಕು. ಆದ್ದರಿಂದ ಯಾರೂ ಕೂಡ ಈ ಆಕ್ರೋಶದ ದಿನದಲ್ಲಿ ಪಾಲ್ಗೊಳ್ಳಬಾರದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.