ತಂಡದಿಂದ ಯುವಕನಿಗೆ ಮಾರಣಾಂತಿಕ ಹಲ್ಲೆ
Update: 2016-11-27 21:03 IST
ಕುಂದಾಪುರ, ನ.27: ಕೋಟೇಶ್ವರ ಕುಂಬ್ರಿ ಶನೇಶ್ವರ ದೇವಸ್ಥಾನದ ಬಳಿ ನ.26ರಂದು ರಾತ್ರಿ 10ಗಂಟೆ ಸುಮಾರಿಗೆ ತಂಡವೊಂದು ಯುವಕನೊಬ್ಬನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಹಲ್ಲೆಗೊಳಗಾದವರನ್ನು ಕೋಟೇಶ್ವರದ ಅರಳಗುಡ್ಡೆ ನಿವಾಸಿ ವಿಠಲ ಎಂಬವರ ಮಗ ಸಂತೋಷ(28) ಎಂದು ಗುರುತಿಸಲಾಗಿದೆ.
ಇವರು ತನ್ನ ಸ್ನೇಹಿತ ರಾಘವೇಂದ್ರ ಎಂಬವರ ಬೈಕ್‌ನಲ್ಲಿ ಮನೆ ಕಡೆಗೆ ಹೋಗುತ್ತಿದ್ದಾಗ ಅಭಿಷೇಕ ಮಾರ್ಕೋಡು, ಬೆಂಕಿ ಮಂಜುನಾಥ, ಭರತ, ಅಶೋಕ, ರಾಮ, ಪ್ರದೀಪ, ದಯಾನಂದ, ಬ್ಯೂಟಿ ಸಂತೋಷ, ಗುಂಬಳ ಗಣೇಶ ಹಾಗೂ ಇತರ ನಾಲ್ಕೈದು ಮಂದಿ ಬೈಕ್‌ನ್ನು ರಸ್ತೆಯಲ್ಲಿ ಅಡ್ಡಲಾಗಿ ಇರಿಸಿ ಸಂತೋಷ್ ರನ್ನು ತಡೆದು ನಿಲ್ಲಿಸಿದ್ದಾರೆ. ಅಲ್ಲದೆ, ಸೋಡಾ ಬಾಟಲಿ ಹಾಗೂ ವಿಕೆಟ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸಂತೋಷ್ ಸ್ನೇಹಿತರು ಸ್ಥಳಕ್ಕೆ ಆಗಮಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.