ಭಾರತ್ ಬಂದ್‌ಗೆ ಎಸ್‌ಡಿಪಿಐ ಬೆಂಬಲ

Update: 2016-11-27 16:21 GMT

ಮಂಗಳೂರು, ನ. 27: ಕೇಂದ್ರ ಸರಕಾರದ ನೋಟು ರದ್ಧತಿ ಯೋಜನೆಯ ಅವ್ಯವಸ್ಥೆಯ ವಿರುದ್ಧ ನವೆಂಬರ್28ರಂದು ನಡೆಯಲಿರುವ ಸಮಾನ ಮನಸ್ಕರ ಭಾರತ್ ಬಂದ್ ಕರೆಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿಆಫ್‌ಇಂಡಿಯಾ (ಎಸ್‌ಡಿಪಿಐ) ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎ. ಸಯೀದ್ ಪ್ರಕಟೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೆ ರಾತ್ರೋರಾತ್ರಿ 500, 1000 ರೂ. ಮುಖ ಬೆಲೆಯ ನೋಟು ಅಮಾನ್ಯಗೊಳಿಸಿ ಆದೇಶ ಹೊರಡಿಸಿರುವುದರಿಂದ ಜನ ಸಾಮಾನ್ಯರ ಜೀವನ ಅಸ್ಥವ್ಯಸ್ಥಗೊಂಡಿದೆ. ಕೃಷಿ, ವಾಣಿಜ್ಯ ಮತ್ತು ಇಡೀ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಆದ್ದರಿಂದ ರಾಷ್ಟ್ರದ ಹಿತದೃಷ್ಟಿಯಿಂದ ಸರಕಾರ ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಹೇಳಿದ್ದಾರೆ.

ಕಾರ್ಮಿಕ ಸಂಘಟನೆಗಳ ಬೆಂಬಲ

ಆಕ್ರೋಶದ ದಿನ ಆಚರಣೆಗೆ ಎಲ್ಲಾ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಸಿಪಿಎಂ ಮುಖಂಡ ವಸಂತ ಆಚಾರಿ ತಿಳಿಸಿದ್ದಾರೆ.
ನೋಟು ಅಮಾನ್ಯಗೊಳಿಸಿದ ಕೇಂದ್ರ ಸರಕಾರದ ವಿರುದ್ಧ ಸೆ.28ರಂದು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುವ ಪ್ರತಿಭಟನೆಯಲ್ಲಿ ಎಲ್ಲಾ ಕಾರ್ಮಿಕ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.

ಶ್ರಮಿಕರ ಸಂಘ ಬೆಂಬಲ

ಆಕ್ರೋಶ ದಿನ ಆಚರಣೆಯ ಅಂಗವಾಗಿ ನ. 28ರಂದು ಬೆಳಗ್ಗೆ 9:30ಕ್ಕೆ ನಗರದ ಹಳೆ ಬಂದರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಂದರು ಶ್ರಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಇಮ್ತಿಯಾಝ್ ತಿಳಿಸಿದ್ದಾರೆ.

ಭಾರತೀಯ ಮಜ್ದೂರ್ ಸಂಘ ವಿರೋಧ

ನವೆಂಬರ್ 28ರ ಆಕ್ರೋಶ ದಿನದ ಭಾರತ್ ಬಂದ್‌ಗೆ ಭಾರತೀಯ ಮಜ್ದೂರ್ ಸಂಘ ವಿರೋಧ ವ್ಯಕ್ತಪಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಎಚ್.ವಿಶ್ವನಾಥ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಸಿ.ವಿ.ಲೋಕೇಶ್ ಪ್ರಕಟೆಯಲ್ಲಿ ತಿಳಿಸಿದ್ದಾರೆ.

ದೇಶದ ಸುಧಾರಣೆ ಅಗತ್ಯವಾಗಿ ಆಗಬೇಕಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ನಿರ್ಧಾರವನ್ನು ದೇಶದ ಜನರು ಬೆಂಬಲಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಬಂದ್‌ಗೆ ಸಹಕರಿಸಬಾರದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News