ಕಾಡ್ಗಿಚ್ಚು ನಂದಿಸಲು ಫೆಲೆಸ್ತೀನ್ ನೆರವು : ಕೃತಜ್ಞತೆ ಸಲ್ಲಿಸಿದ ಇಸ್ರೇಲ್

Update: 2016-11-27 16:22 GMT

ಜೆರುಸಲೇಂ,ನ.27: ದೇಶದ ವಿವಿಧೆಡೆ ಹಾವಳಿಯೆಬ್ಬಿಸಿರುವ ಕಾಳ್ಗಿಚ್ಚನ್ನು ನಂದಿಸುವುದಕ್ಕೆ ನೆರವಾಗುವುದಕ್ಕಾಗಿ ಅಗ್ನಿಶಾಮಕ ತಂಡಗಳನ್ನು ಹಾಗೂ ಟ್ರಕ್‌ಗಳನ್ನು ರವಾನಿಸಿದ್ದಕ್ಕಾಗಿ ಫೆಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಅವರಿಗೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಕೃತಜ್ಞತೆ ಸಲ್ಲಿಸಿದ್ದಾರೆ.

ಬೆಂಕಿಯ ಕೆನ್ನಾಲಿಗೆಗಳನ್ನು ನಂದಿಸಲು ಯೆಹೂದ್ಯರು ಹಾಗೂ ಆರಬ್ಬರು ‘ತಮ್ಮ ಮನೆಗಳನ್ನು ತೆರೆದಿದ್ದುದನ್ನು’ ಇಸ್ರೇಲ್ ಪ್ರಶಂಸಿಸುವುದಾಗಿ ಪ್ರಧಾನಿ ಕಾರ್ಯಾಲಯದ ಹೇಳಿಕೆಯು ತಿಳಿಸಿದೆ.

ಇಸ್ರೇಲ್ ಹಾಗೂ ಅದರ ನೆರೆಹೊರೆಯಲ್ಲಿರುವ ಪಶ್ಚಿಮದಂಡೆ,ಈಜಿಪ್ಟ್ ಹಾಗೂ ಲೆಬನಾನ್‌ಗಳಲ್ಲಿ ಕಳೆದ ಐದು ದಿನಗಳಿಂದ ಹಾಹಾಕಾರವೆಬ್ಬಿಸಿರುವ ಸರಣಿ ಕಾಳ್ಗಿಚ್ಚನ್ನು ನಂದಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಲು ಇಸ್ರೇಲ್ ಹಾಗೂ ಫೆಲೆಸ್ತೀನ್ ನಾಯಕರು ಮಾತುಕತೆ ನಡೆಸಿದ್ದರು.

ಹೈಫಾ ನಗರದಲ್ಲಿ ಹಾವಳಿಯುಂಟು ಮಾಡಿರುವ ಭೀಕರ ಕಾಡ್ಗಿಚ್ಚನ್ನು ನಂದಿಸುವುದಕ್ಕೆ ಇಸ್ರೇಲ್‌ಗೆ ನೆರವಾಗಲು ಪೆಲೆಸ್ತೀನ್‌ನ ರಾಷ್ಟ್ರೀಯ ಪ್ರಾಧಿಕಾರವು ಎಂಟು ಅಗ್ನಿಶಾಮಕ ಟ್ರಕ್‌ಗಳನ್ನು ಗಿಲ್‌ಬೊವಾ ಪರ್ವತಶ್ರೇಣಿಗಳ ಮಾರ್ಗವಾಗಿ ಕಳುಹಿಸಿಕೊಟ್ಟಿತ್ತು.

ಶುಕ್ರವಾರ ಹಾಗೂ ಶನಿವಾರದಂದು ಫೆಲೆಸ್ತೀನಿಯರು ಪಶ್ಚಿಮದಂಡೆಯಲ್ಲಿರುವ ಯೆಹೂದಿ ವಸಾಹತುಪ್ರದೇಶಗಳಲ್ಲಿ ಹರಡಿರುವ ಕಾಡ್ಗಿಚ್ಚನ್ನು ಆರಿಸಲು ಇನ್ನೆರಡು ಟ್ರಕ್‌ಗಳನ್ನು ಕಳುಹಿಸಿಕೊಟ್ಟಿದ್ದರು.
 ಈ ಭೀಕರ ಕಾಡ್ಗಿಚ್ಚಿನಿಂದಾಗಿ ಪಶ್ಚಿಮದಂಡೆಯಲ್ಲಿರುವ ಯಹೂದಿ ವಸಾಹತು ಪ್ರದೇಶಗಳಲ್ಲಿರುವ ಕನಿಷ್ಠ 40 ಮನೆಗಳಿಗೆ ಹಾನಿಯಾಗಿದ್ದು, ಇತರ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.


 ಅಸಾಧಾರಣವಾದ ಒಣ ಹಾಗೂ ಭಾರೀ ಗಾಳಿಯಿಂದ ಕೂಡಿದ ಹವೆಯು ಇಸ್ರೇಲ್ ಅರ್ಧದಷ್ಟು ಭಾಗದ ಮೇಲೆ ಕಾಡ್ಗಿಚ್ಚು ತ್ವರಿತವಾಗಿ ಹರಡುವಂತೆ ಮಾಡಿದೆಯೆಂದು ತಜ್ಞರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News