ಕ್ಯಾಲಿಫೋರ್ನಿಯಾದ ಮಸೀದಿಗಳಿಗೆ ‘ಟ್ರಂಪ್ ಬೆಂಬಲಿಗ’ರಿಂದ ಬೆದರಿಕೆ ಪತ್ರಗಳು!

Update: 2016-11-27 16:45 GMT

ಲಾಸ್‌ಏಂಜಲೀಸ್,ನ.27: ನಿಯೋಜಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಸ್ಲಿಮರಿಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಹಾಗೂ ಅಮೆರಿಕದಲ್ಲಿ ಮುಸ್ಲಿಮರ ನರಮೇಧ ನಡೆಯಲಿದೆಯೆಂಬ ಪ್ರಚೋದನಕಾರಿ ಬರಹಗಳುಳ್ಳ ಪತ್ರಗಳು ಕ್ಯಾಲಿಫೋರ್ನಿಯಾ ರಾಜ್ಯದ ಹಲವಾರು ಮಸೀದಿಗಳಿಗೆ ಬಂದಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಪೊಲೀಸ್ ಭದ್ರತೆಯನ್ನು ನೀಡುವಂತೆ ನಾಗರಿಕ ಹಕ್ಕುಗಳ ಸಂಘಟನೆಗಳು ಮನವಿ ಮಾಡಿವೆ.

ಕೈಬರಹದಲ್ಲಿರುವ ಈ ಪತ್ರದ ಫೋಟೋಕಾಪಿಗಳನ್ನು ಲಾಂಗ್‌ಬೀಚ್, ಕ್ಲೇರ್‌ಮೊಂಟ್ ಹಾಗೂ ಸ್ಯಾನ್‌ಜೋಸ್‌ನ ಎವರ್‌ಗ್ರೀನ್ ಇಸ್ಲಾಮಿಕ್ ಸೆಂಟರ್ ಮಸೀದಿಗಳಲ್ಲಿ ಈ ಬೆದರಿಕೆ ಪತ್ರಗಳು ಬಂದಿರುವುದಾಗಿ ಅಮೆರಿಕನ್-ಇಸ್ಲಾಮಿಕ್ ಬಾಂಧವ್ಯಗಳ ಮಂಡಳಿ (ಸಿಎಐಆರ್) ವರದಿ ಮಾಡಿದೆ.

‘‘ನಗರಕ್ಕೆ ಡೊನಾಲ್ಡ್ ಟ್ರಂಪ್ ಎಂಬ ನೂತನ ಪೊಲೀಸ್ ವರಿಷ್ಠ ನೇಮಕವಾಗಿದ್ದಾರೆ. ಅವರು ಅಮೆರಿಕವನ್ನು ಶುದ್ಧೀಕರಿಸಲಿದ್ದಾರೆ ಹಾಗೂ ಅದು ಮತ್ತೊಮ್ಮೆ ಪ್ರಕಾಶಿಸುವಂತೆ ಮಾಡಲಿದ್ದಾರೆ. ಹಿಟ್ಲರ್ ಯಹೂದಿಗಳಿಗೆ ಏನನ್ನು ಮಾಡಿದ್ದಾರೋ ಅದನ್ನೇ ಟ್ರಂಪ್ ಮುಸ್ಲಿಮರಿಗೂ ಮಾಡಲಿದ್ದಾರೆ’’ ಎಂಬಿತ್ಯಾದಿ ಪ್ರಚೋದನಕಾರಿ ಬರಹಗಳನ್ನು ಈ ಪತ್ರಗಳಲ್ಲಿ ಬರೆಯಲಾಗಿದೆ.

 ಈ ವಿದ್ವೇಷಕಾರಿ ಪತ್ರಗಳಿಂದ ಲಾ ಕೌಂಟಿ ಮಸೀದಿಗಳ ಸದಸ್ಯರು ತುಂಬಾ ನೊಂದಿದ್ದಾರೆ. ಟ್ರಂಪ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಡಿದ ಬೇಜವಾಬ್ದಾರಿಯ ಹಾಗೂ ಪ್ರಚೋದನಕಾರಿ ಭಾಷಣಗಳು, ಸ್ವಘೋಷಿತ ಟ್ರಂಪ್ ಬೆಂಬಲಿಗರಲ್ಲಿ ದ್ವೇಷ ಹಾಗೂ ಕ್ರೋಧದ ಬೆಂಕಿಗೆ ತುಪ್ಪ ಸುರಿದಿದೆಯೆಂದು ಸಿಎಐಆರ್‌ನ ಲಾಸ್‌ಏಂಜಲೀಸ್ ಘಟಕದ ಕಾರ್ಯಕಾರಿ ನಿರ್ದೇಶಕ ಹುಸ್ಸಂ ಆಯೊಲೊಶ್ ಹೇಳಿಕೆಯೊಂದರಲ್ಲಿ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News