ಹಳೆ ನೋಟು ನೀಡಿ ಸಚಿವ ಸದಾನಂದ ಗೌಡರಿಗೆ ಸಹೋದರನ ಮೃತದೇಹ ಪಡೆಯಲು ಸಾಧ್ಯವಾಗಲಿಲ್ಲ: ಖರ್ಗೆ
ಹೊಸದಿಲ್ಲಿ, ನ.28: ಕೇಂದ್ರ ಸರಕಾರ ಐನೂರು ಹಾಗೂ ಸಾವಿರ ರೂ. ನೋಟ್ ನಿಷೇಧ ನಿರ್ಧಾರದಿಂದಾಗಿ ದೇಶದ ಅರ್ಥ ವ್ಯವಸ್ಥೆ ಹದಗೆಟ್ಟಿದೆ.ಜನಸಾಮಾನ್ಯರಿಗೆ ತೊಂದರೆಯಾಗಿದೆ. ಸಚಿವ ಡಿ.ವಿ.ಸದಾನಂದ ಗೌಡರಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಮೃತಪಟ್ಟ ಸಹೋದರನ ಮೃತದೇಹ ಪಡೆಯಲು ಆಸ್ಪತ್ರೆಯ ಬಿಲ್ ಪಾವತಿಗೆ ಹಳೆಯ ನೋಟ್‌ಗಳನ್ನು ನಿರಾಕರಿಸಲಾಗಿತ್ತು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ ಅವರು " ಪ್ರಧಾನಿ ನರೇಂದ್ರ ಮೋದಿ ನಿರ್ಧಾರದಿಂದಾಗಿ ಕೇಂದ್ರ ಸಚಿವರೇ ಈ ರೀತಿ ಸಮಸ್ಯೆ ಎದುರಿಸಿದರು. ಐನೂರು ಮತ್ತು ಸಾವಿರ ರೂ. ನೋಟ್ ಗಳನ್ನು ಪಡೆಯಲು ಆಸ್ಪತ್ರೆಯ ಸಿಬ್ಬಂದಿಗಳು ನಿರಾಕರಿಸಿದರು. ಕೊನೆಗೆ ಅವರು ಚೆಕ್ ನೀಡಿ ಸಹೋದರನ ಮೃತದೇಹವನ್ನು ಆಸ್ಪತ್ರೆ ಯಿಂದ ಕೊಂಡೊಯ್ದರು.ಓರ್ವ ಕೇಂದ್ರ ಸಚಿವರ ಪರಿಸ್ಥಿತಿ ಹೀಗಾದರೆ ಉಳಿದವರ ಪಾಡೇನು ? ಎಂದು ಪ್ರಶ್ನಿಸಿದ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ನಿರ್ಧಾರದ ಬಗ್ಗೆ ದೇಶಾದ್ಯಂತ ಆಕ್ರೋಶ ಇದೆ. ಇಂದು ದೇಶಾದ್ಯಂತ ಆಕ್ರೋಶ ದಿವಸ್ ಆಚರಿಸಲಾಗುತ್ತಿದೆ ಎಂದರು.
ಲೋಕಸಭೆಯಲ್ಲಿ ನಿಲುವಳಿ ಮಂಡನೆಗೆ ಖರ್ಗೆ ಅವಕಾಶ ಕೋರಿದರು. ಆದರೆ ಸ್ವೀಕರ್ ಸುಮಿತ್ರಾ ಮಹಾಜನ್ ಅವಕಾಶ ನಿರಾಕರಿಸಿದರು.