ಕೇಂದ್ರ ಸಚಿವ ಶರ್ಮಾ ತಮ್ಮ ಮಗಳ ಮದುವೆಯನ್ನು 2.5ಲಕ್ಷದಲ್ಲಿ ನಿಭಾಯಿಸಿದರೇ? ಕೇಜ್ರಿವಾಲ್ ಪ್ರಶ್ನೆ..
ಹೊಸದಿಲ್ಲಿ, ನ.28: ನೋಟು ರದ್ದತಿ ವಿಷಯದಲ್ಲಿ ಬಿಜೆಪಿ ವಿರುದ್ಧ ಮತ್ತೆ ವಾಗ್ಧಾಳಿ ನಡೆಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬಾರಿ ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆಯನ್ನೇ ಕೇಳಿದ್ದಾರೆ.
ಇತ್ತೀಚೆಗೆ ಕೇಂದ್ರ ಸಚಿವ ಮಹೇಶ್ ಶರ್ಮಾ ಅವರ ಪುತ್ರಿಯ ವಿವಾಹ ನಡೆಯಿತು. ಇದನ್ನು ಉಲ್ಲೇಖಿಸಿರುವ ಕೇಜ್ರಿವಾಲ್ ನೋಟು ರದ್ದತಿ ಬಳಿಕ ಮಹೇಶ್ ಶರ್ಮಾ ಅವರು ತಮ್ಮ ಪುತ್ರಿಯ ಮದುವೆಯನ್ನು ಹೇಗೆ ನಿಭಾಯಿಸಿದರು ಎಂದು ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅವರು ಇಡೀ ಮದುವೆಯನ್ನು ಕೇವಲ 2.5ಲಕ್ಷ ರೂಪಾಯಿಯಲ್ಲಿ ನಿಭಾಯಿಸಿದರೇ? ಮದುವೆ ಸಂಬಂಧಿತ ಎಲ್ಲಾ ಖರ್ಚುಗಳನ್ನು ಚೆಕ್ ಮೂಲಕ ಪಾವತಿ ಮಾಡಿದರೇ? ಅವರು ನೋಟುಗಳನ್ನು ಎಲ್ಲಿ, ಹೇಗೆ ಬದಲಾಯಿಸಿದರು. ಈ ಎಲ್ಲಾ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕೇಂದ್ರ ಸಚಿವರ ಪ್ರತಿಕ್ರಿಯೆ:
ಕೇಜ್ರಿವಾಲರ ಪ್ರಶ್ನೆಗೆ ಪ್ರತಿಕ್ರಯಿಸಿರುವ ಕೇಂದ್ರ ಸಚಿವ ಮಹೇಶ್ ಶರ್ಮಾ "ಮದುವೆಯಾಗುತ್ತಿರುವುದು ನನ್ನ ಮಗಳಿಗೆ ಅಲ್ಲ,ಮಗನಿಗೆ.ಎಲ್ಲಾ ಖರ್ಚುಗಳಿಗೆ ಬ್ಯಾಂಕ್ ಮೂಲಕ ಹಣ ಪಾವತಿಸಲಾಗುತ್ತಿದೆ." ಎಂದು ಹೇಳಿದ್ದಾರೆ.
ನೋಟು ರದ್ದತಿಗೆ ಸೂಕ್ತ ತಯಾರಿ ಮಾಡಿಕೊಳ್ಳದೆ ಜನಸಾಮಾನ್ಯರನ್ನು ಕೇಂದ್ರ ಸರಕಾರ ಸಂಕಷ್ಟಕ್ಕೆ ತಳ್ಳಿದೆ ಹಾಗೂ ದೇಶದ ಆರ್ಥಿಕತೆಗೆ ಭಾರೀ ಹಾನಿ ಉಂಟುಮಾಡಿದೆ ಎಂದು ಆರೋಪಿಸಿ ವಿಪಕ್ಷಗಳು ಇಂದು ಆಕ್ರೋಶ್ ದಿವಸ್ ಗೆ ಕರೆ ನೀಡಿದೆ