ಕೇಂದ್ರದ ನಡೆಯಿಂದ ಸಾಮಾನ್ಯ ಜನರ ಅಪಹಾಸ್ಯ: ಕೆ.ಆರ್. ಶ್ರೀಯಾನ್
ಮಂಗಳೂರು, ನ.28: ಕೇಂದ್ರ ಸರಕಾರವು 500 ರೂ. ಹಾಗೂ 1000 ರೂ.ಗಳನ್ನು ಏಕಾಏಕಿಯಾಗಿ ರದ್ದು ಮಾಡುವ ಮೂಲಕ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಸಿಪಿಎಂನ ಮುಖಂಡ ಕೆ.ಆರ್. ಶ್ರೀಯಾನ್ ಅಭಿಪ್ರಾಯಿಸಿದ್ದಾರೆ.
ಆಕ್ರೋಶ ದಿನದ ಅಂಗವಾಗಿ ಸಿಪಿಎಂನ ದ.ಕ. ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಡವರು ಆರಾಮವಾಗಿ ನಿದ್ದೆ ಮಾಡುತ್ತಿದ್ದಾರೆ. ಶ್ರೀಮಂತರು ನಿದ್ಧೆ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿಯೊಬ್ಬರು ಹೇಳಿಕೆ ನೀಡುವ ಮೂಲಕ ಸಾಮಾನ್ಯ ಜನರನ್ನು ಅಪಹಾಸ್ಯ ಮಾಡಲಾಗಿದೆ. ನೋಟು ರದ್ಧತಿಯಿಂದ ತೊಂದರೆಗೆ ಒಳಗಾಗಿರುವವರು ಬಡಜನರೇ ಹೊರತು ಶ್ರೀಮಂತರಲ್ಲ ಎಂದವರು ಹೇಳಿದರು.
ಭೂಮಿ, ಚಿನ್ನ ಖರೀದಿಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಪ್ಪು ಹಣದ ವ್ಯವಹಾರ ನಡೆದಿದ್ದರೂ ಕೇಂದ್ರ ಸರಕಾರ ಆ ಬಗ್ಗೆ ಗಮನ ಹರಿಸದೆ, ಬಡಜನರ ಬದುಕಿನ ಮೇಲೆ ಪ್ರಹಾರ ನಡೆಸಿದೆ ಎಂದರು.
ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡರಾದ ಯಾದವ ಶೆಟ್ಟಿ, ದಯಾನಂದ ಶೆಟ್ಟಿ, ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಾಯಾರೆ್ ಹಾಗೂ ಇತರರು ಉಪಸ್ಥಿತರಿದ್ದರು.