×
Ad

ಪರಾರಿಯಾದ ಖಾಲಿಸ್ತಾನ್ ಉಗ್ರ ಮತ್ತೆ ಪೊಲೀಸ್ ಬಲೆಗೆ ಬಿದ್ದಿದ್ದು ಹೇಗೆ ?

Update: 2016-11-28 15:13 IST

ಹೊಸದಿಲ್ಲಿ, ನ.28: ಪಟಿಯಾಲದ ನಾಭ ಜೈಲಿಗೆ ರವಿವಾರ ಬೆಳಿಗ್ಗೆ ಸಿನಿಮೀಯ ರೀತಿಯಲ್ಲಿ ದಾಳಿ ನಡೆದ ನಂತರ ಅಲ್ಲಿಂದ ಪರಾರಿಯಾಗಿದ್ದ ಖಾಲಿಸ್ತಾನ ಲಿಬರೇಶನ್ ಫೋರ್ಸ್ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟು ಸೋಮವಾರ  ಪತ್ತೆಯಾದ ಹಿಂದಿನ ಕಥೆ ರೋಚಕ. ಆತನನ್ನು ದಿಲ್ಲಿಯಲ್ಲಿ ಬಂಧಿಸಲಾಗಿತ್ತು.

ಕಾರ್ಯಾಚರಣೆಯಲ್ಲಿ ದಿಲ್ಲಿ, ಪಂಜಾಬ್ ಹಾಗೂ ರಾಜಸ್ಥಾನ ಪೊಲೀಸರ ಹೊರತಾಗಿ ಗುಪ್ತಚರ ಬ್ಯುರೋ ಹಾಗೂ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ದೋವಲ್ ತಮ್ಮನ್ನು ತೊಡಗಿಸಿಕೊಂಡಿದ್ದರು.

ಜೈಲಿನ ಮೇಲೆ ದಾಳಿ ನಡೆಸಿದ್ದ  ಪರ್ವಿಂದರ್ ಎಂಬವನನ್ನು ಉತ್ತರ ಪ್ರದೇಶದ ಶಾಮ್ಲಿಯಲ್ಲಿ ರವಿವಾರ ಸಂಜೆಯೇ ಬಂಧಿಸಲಾಗಿತ್ತು. ಜೈಲಿನಿಂದ ತಪ್ಪಿಸಿಕೊಂಡಿದ್ದ ಉಗ್ರ ತನ್ನ ಸಹಚರರೊಂದಿಗೆ ಪರಾರಿಯಾದ ಕಾರು ಪೊಲೀಸ್ ಬ್ಯಾರಿಕೇಡುಗಳನ್ನು ಕೈತಾಲ್, ಹರ್ಯಾಣದಲ್ಲಿ ಮುರಿದು ಮುಂದುವರಿದಿದೆಯೆಂದು ತಿಳಿದ ಪೊಲೀಸರು ಆತನ ಕಾರು ಕುರುಕ್ಷೇತ್ರದತ್ತ ಸಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿದ್ದರು. ತರುವಾಯ ಅವರ ತ್ಯಜಿಸಿದ ಕಾರು ಕೈತಾಲ್ ನಲ್ಲಿ ಪತ್ತೆಯಾಗಿತ್ತು. ಮಿಂಟೂ ಕಾರನ್ನು ಕುರುಕ್ಷೇತ್ರ ತಲುಪಲು ಇನ್ನೂ 20 ಕಿಮೀ ಇದೆ ಎನ್ನುವಷ್ಟರಲ್ಲಿ ತ್ಯಜಿಸಿ ನಂತರ ಬಸ್ಸೊಂದನ್ನು ಹತ್ತಿದ್ದ. ದಿಲ್ಲಿಯ ನಿಜಾಮುದ್ದೀನ್ ರೈಲು ನಿಲ್ದಾಣ ತಲುಪಲು ಆತ ಕನಿಷ್ಠ ಎರಡು ಮೂರು ಬಸ್ಸು ಬದಲಾಯಿಸಿದ್ದ.

ತರುವಾಯ ಆತ ದೆಹಲಿಯ ಸುಭಾಶ್ ನಗರದಲ್ಲಿರುವ ತನ್ನ ಕೆಲ ಸಂಬಂಧಿಕರಿಗೆ ಮಾಡಿದ ಫೋನ್ ಕರೆಗಳು ಪೊಲೀಸರಿಗೆ ಸಿಕ್ಕ ಅಂತಿಮ ಸುಳಿವಾಗಿದ್ದವು. ಈ ಫೋನ್ ಕರೆಯ ಆಧಾರದಲ್ಲಿ ಆತನನ್ನು ದಿಲ್ಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆತ ಅಲ್ಲಿಂದ  ರಾಜಧಾನಿಯ ದಕ್ಷಿಣ ಭಾಗಕ್ಕೆ ಪಯಣಿಸಲು ಯೋಜಿಸಿದ್ದ.

ಮಿಂಟೂ ತನ್ನ ಗಡ್ಡ ಬೋಳಿಸಿ, ಕೂದಲನ್ನೂ ಕತ್ತರಿಸಿ ಯಾರೂ ತನ್ನನ್ನು ಗುರುತಿಸದಂತೆ ಎಚ್ಚರ ವಹಿಸಿದ್ದ. ಮೇಲಾಗಿ ಆತನ  ಬಳಿಯಲ್ಲಿ ಯಾವುದೇ ಶಸ್ತ್ರಾಸ್ತ್ರಗಳಿರಲಿಲ್ಲ. ಮಿಂಟೂ ಜೈಲಿನಿಂದ ತಪ್ಪಿಸಿಕೊಂಡಾಗ ಆತನ ಜೊತೆಗೇ ಜೈಲಿನಿಂದ ತಪ್ಪಿಸಿಕೊಂಡಿದ್ದ ಇತರ ಐದು ಮಂದಿಯನ್ನು ಇನ್ನಷ್ಟೇ ಪತ್ತೆ ಹಚ್ಚ ಬೇಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News