ಅಂಬ್ಲಮೊಗರು: ಎಲ್ಯಾರ್ ನಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವರಿಂದ ಶಂಕುಸ್ಥಾಪನೆ
ಉಳ್ಳಾಲ, ನ.28: ಅಂಬ್ಲಮೊಗರು ಗ್ರಾಮದ ಎಲ್ಯಾರ್ ಪದವಿನಲ್ಲಿ ರವಿವಾರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಸಚಿವ ಖಾದರ್ ಅವರು ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಎಲ್ಲರಿಗೂ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗಬೇಕೆನ್ನುವ ನಿಟ್ಟಿನಲ್ಲಿ ನೂತನ ಆರೋಗ್ಯ ಕೇಂದ್ರಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿದ್ದು, ಕಾಮಗಾರಿ ಕಳಪೆ ಎಂದು ಕಂಡುಬಂದಲ್ಲಿ ಜನರೇ ನಿಲ್ಲಿಸಿ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಎಂದು ಹೇಳಿದರು.
ಎಲ್ಯಾರ್ ನಲ್ಲಿ 1982ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೊಂಡಿದ್ದು, ಇದೀಗ ನೂತನ ಸುಸಜ್ಜಿತ ಕಟ್ಟಡಕ್ಕೆ 1.30 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಶೀಘ್ರ ಕಾಮಗಾರಿ ಆರಂಭಗೊಳ್ಳಲಿದ್ದು, ವರ್ಷದಲ್ಲೇ ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಯುವಂತೆ ಜನರೇ ನೋಡಿಕೊಳ್ಳಬೇಕು. ಕೆಲಸ ನಡೆಯುವ ಸಂದರ್ಭ ಸಹಕಾರ ನೀಡಬೇಕು ಎಂದು ಹೇಳಿದರು.
ಉಳ್ಳಾಲದಲ್ಲಿ ಆಸ್ಪತ್ರೆಗೆ ಆರು ಕೋಟಿ ಹಾಗೂ ಸಿಬ್ಬಂದಿಗಳಿಗೆ ನಾಲ್ಕು ಕೋಟಿ ಅನುದಾನ ಬಿಡುಗಡೆಗೊಂಡಿದೆ. ಕುರ್ನಾಡ್, ಮಂಚಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಭಿವೃದ್ಧಿಗೊಳಿಸಲಾಗಿದೆ. ಮೇರಮಜಲುವಿನಲ್ಲಿ ಎಎನ್ಎಂ ನೇಮಕವಾಗಿದೆ. ಮನುಷ್ಯರಂತೆ ಪಶುಗಳಿಗೂ ಸೂಕ್ತ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿ ಕೋಟೆಕಾರ್ನಲ್ಲಿ ಪಶು ಚಿಕಿತ್ಸಾಲಯಕ್ಕೆ ಅನುದಾನ ಬಿಡುಗಡೆಗೊಂಡಿದ್ದು, ತಲಪಾಡಿಯಲ್ಲಿ ಜಮೀನಿಗೆ ಹುಡುಕಾಟ ನಡೆದಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯರಾದ ಶಶಿಪ್ರಭಾ ಶೆಟ್ಟಿ, ಆಲ್ಫ್ರೆಡ್ ವಿಲ್ಮಾ ಡಿಸೋಜ, ಅಂಬ್ಲಮೊಗರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ರಫೀಕ್, ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್, ತಾಲೂಕು ಆರೋಗ್ಯಾಧಿಕಾರಿ ನವೀನ್ಚಂದ್ರ ಕುಲಾಲ್, ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಸುದೇಶ್ ದೇರೆಬೈಲ್ ಮೊದಲಾದವರು ಉಪಸ್ಥಿತರಿದ್ದರು. .