×
Ad

ನೋಟು ಅಮಾನ್ಯದಿಂದ ಶ್ರೀಮಂತರಿಗೆ ಲಾಭ: ಸಚಿವ ರೈ

Update: 2016-11-28 17:03 IST

ಬಂಟ್ವಾಳ, ನ.28: ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ಜನರಿಗೆ ಹಂಚುವೆ ಎಂದು ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗದ ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣದ ಹೆಸರಿನಲ್ಲಿ ನೋಟು ಅಮಾನ್ಯಗೊಳಿಸುವ ಮೂಲಕ ದೇಶಾದ್ಯಂತ ಶ್ರೀಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.

500, 1000 ರೂ. ಮುಖಬೆಲೆಯ ನೋಟು ರದ್ದುಗೊಳಿಸಿದ ಬಳಿಕ ದೇಶಾದ್ಯಂತ ಉಂಟಾಗಿರುವ ಗೊಂದಲವನ್ನು ಖಂಡಿಸಿ ವಿರೋಧ ಪಕ್ಷಗಳು ಕರೆ ನೀಡಿದ್ದ ಆಕ್ರೋಶ್ ದಿನ್ ಆಚರಣೆ ಪ್ರಯುಕ್ತ ಸೋಮವಾರ ಬಂಟ್ವಾಳ ಬ್ಲಾಕ್ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನ ಮೇಲ್ಸೇತುವೆ ಅಡಿಯಲ್ಲಿ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಕಪ್ಪುಹಣವನ್ನು ಪತ್ತೆಹಚ್ಚಲು 500, 1000 ನೋಟು ಅಮಾನ್ಯಗೊಳಿಸಲಾಗಿದೆ ಎಂದು ಹೇಳುವ ನರೇಂದ್ರ ಮೋದಿ, 20 ದಿನಗಳಲ್ಲಿ ಎಷ್ಟು ಕಪ್ಪು ಹಣ ಪತ್ತೆಹಚ್ಚಿದ್ದಾರೆ ಎಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ಸಚಿವ ರಮಾನಾಥ ರೈ, ನೋಟು ಅಮಾನ್ಯದ ಕುರಿತ ಮಾಹಿತಿಯನ್ನು ಗೌಪ್ಯವಾಗಿಡಲಾಗಿತ್ತು ಎಂಬುದು ಶುದ್ಧ ಸುಳ್ಳಾಗಿದೆ. ಕಪ್ಪು ಹಣವನ್ನು ಹೊಂದಿದ್ದ ಕಾರ್ಪೊರೇಟ್ ಶಕ್ತಿಗಳು, ಬಿಜೆಪಿ ನಾಯಕರು ಸೇರಿದಂತೆ ಮೋದಿ ಆಪ್ತರಿಗೆ ಮೊದಲೇ ಗೊತ್ತಿತ್ತು. ಅವರೆಲ್ಲರೂ ತಮ್ಮಲಿದ್ದ ಕಪ್ಪು ಹಣವನ್ನು ಬಿಳಿ ಮಾಡಿದ ಬಳಿಕವೇ ಮೋದಿ ನೋಟು ಅಮಾನ್ಯ ಘೋಷಣೆ ಹೊರಡಿಸಿದ್ದು ಎಂದು ಆರೋಪಿಸಿದರು.

ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ನೀಡಿದ ಒಂದೇ ಒಂದು ಭರವಸೆ ಇದುವರೆಗೆ ಈಡೇರಿಲ್ಲ. ನನ್ನ ಖಾತೆಗೆ 15 ಲಕ್ಷ ರೂಪಾಯಿ ಇನ್ನೂ ಜಮೆ ಆಗಿಲ್ಲ ಎಂದು ವ್ಯಂಗ್ಯವಾಡಿದ ಸಚಿವರು, ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿದೆ. ದೇಶದ ಖಜಾನೆ ಬರಿದಾಗಿದ್ದು, ಜನಸಾಮಾನ್ಯರು ಕಷ್ಟಪಟ್ಟು ಕೂಡಿಟ್ಟ ಅಲ್ಪಸ್ವಲ್ಪ ಹಣವನ್ನು ಬ್ಯಾಂಕ್‌ಗೆ ತುಂಬಿಸುವ ಮೂಲಕ ಕಾರ್ಪೊರೇಟ್ ಶಕ್ತಿಗಳ ಹಿತ ಕಾಪಾಡಲು ನರೇಂದ್ರ ಮೋದಿ ಹೊರಟಿದ್ದಾರೆ ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಜಿಪಂ ಸದಸ್ಯರಾದ ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಪ್ರಮುಖರಾದ ಎ.ಸಿ.ಭಂಡಾರಿ, ಅಬೂಬಕರ್, ಮುಹಮ್ಮದ್ ನಂದಾವರ, ಯಾಸ್ಮೀನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News