ನೋಟು ರದ್ದತಿ ಬಳಿಕ ಬ್ಯಾಂಕ್ ಗೆ ಹಾಕಿದ ಹಣಕ್ಕೆ ಎಷ್ಟು ತೆರಿಗೆ, ಎಷ್ಟು ದಂಡ ? ನೋಡಿ
ಹೊಸದಿಲ್ಲಿ,ನ.28: ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಸೂದೆಯೊಂದನ್ನು ಇಂದು ಲೋಕಸಭೆಯಲ್ಲಿ ಮಂಡಿಸುವ ಮೂಲಕ ಸರಕಾರವು ಕಪ್ಪುಹಣ ಖದೀಮರಿಗೆ ತಮ್ಮ ಕಾಳಧನವನ್ನು ಬಿಳಿಯಾಗಿಸಿಕೊಳ್ಳಲು ಬಹುಶಃ ಕೊನೆಯ ಅವಕಾಶವೊಂದನ್ನು ಒದಗಿಸಿದೆ.
ನೋಟು ನಿಷೇಧದ ಬಳಿಕ ಬ್ಯಾಂಕ್ ಖಾತೆಯಲ್ಲಿ ಹಳೆಯ ನೋಟುಗಳ ಮೂಲಕ ಜಮಾ ಮಾಡಿರುವ ಲೆಕ್ಕವಿಲ್ಲದ ಹಣವನ್ನು ಘೋಷಿಸಿದರೆ ಒಟ್ಟು ಶೇ.50 ರಷ್ಟು ತೆರಿಗೆ,ದಂಡ ಮತ್ತು ಮೇಲ್ತೆರಿಗೆಯನ್ನು ಪಾವತಿಸಿ ಪಾರಾಗಬಹುದು. ಆದರೆ ನಿಮ್ಮ ಆದಾಯಕ್ಕೆ ತಾಳೆಯಾಗದ ಬ್ಯಾಂಕ ಠೇವಣಿಯನ್ನು ಆದಾಯ ತೆರಿಗೆ ಅಧಿಕಾರಿಗಳೇ ಪತ್ತೆ ಹಚ್ಚಿದರೆ ಒಟ್ಟು ತೆರಿಗೆ,ದಂಡ ಇತ್ಯಾದಿ ಸೇರಿ ಶೇ.85ರಷ್ಟು ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ವಿತ್ತಸಚಿವ ಅರುಣ್ ಜೇಟ್ಲಿಯವರು ಮಂಡಿಸಿರುವ ಮಸೂದೆಯು ಪ್ರಸ್ತಾಪಿಸಿರುವಂತೆ ಘೋಷಿತ ಹಣದ ಶೇ.25ನ್ನು ನಾಲ್ಕು ವರ್ಷಗಳ ಲಾಕ್‌ಇನ್ ಅವಧಿಯಲ್ಲಿ ಹಿಂಪಡೆಯುವಂತಿಲ್ಲ ಮತ್ತು ಈ ಹಣಕ್ಕೆ ಬಡ್ಡಿಯೂ ದೊರೆಯುವುದಿಲ್ಲ.
ನಿಷೇಧಿತ 500 ಮತ್ತು 1,000 ರೂ.ನೋಟುಗಳ ರೂಪದಲ್ಲಿ ತಮ್ಮ ಬಳಿಯಿರುವ ಕಪ್ಪುಹಣವನ್ನು ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ(ಪಿಎಂಜಿಕೆ) ಯೋಜನೆ,2016ರಡಿ ಘೋಷಿಸುವುದನ್ನು ಆಯ್ಕೆ ಮಾಡಿಕೊಂಡವರು ಅಘೋಷಿತ ಆದಾಯದ ಶೇ.30 ರಷ್ಟು ತೆರಿಗೆಯ ಜೊತೆಗೆ ಶೇ.10ರಷ್ಟು ದಂಡ ಮತ್ತು ತೆರಿಗೆ ಹಣದ ಶೇ.33ರಷ್ಟು ಪಿಎಂಜಿಕೆ ಸೆಸ್ ಅನ್ನು ಪಾವತಿಸಬೇಕಾಗುತ್ತದೆ.
ಅಲ್ಲದೆ ಹೀಗೆ ತಮ್ಮ ಕಪ್ಪುಹಣವನ್ನು ಘೋಷಿಸಿಕೊಂಡವರು ಸರಕಾರವು ಆರ್‌ಬಿಐ ಜೊತೆ ಸಮಾಲೋಚನೆಯ ಬಳಿಕ ಪ್ರಕಟಿಸಲಿರುವ ಯೋಜನೆಯೊಂದರಲ್ಲಿ ಘೋಷಿತ ಮೊತ್ತದ ಶೇ.25ರಷ್ಟನ್ನು ಕಡ್ಡಾಯವಾಗಿ ನಾಲ್ಕು ವರ್ಷಗಳ ಅವಧಿಗೆ ಬಡ್ಡಿರಹಿತ ಠೇವಣಿಯಿರಿಸಬೇಕಾಗುತ್ತದೆ. ಈ ಯೋಜನೆಯ ಮೂಲಕ ಸಂಗ್ರಹಿತ ಹಣವನ್ನು ನೀರಾವರಿ,ವಸತಿ,ಶೌಚಾಲಯ,ಮೂಲಸೌಕರ್ಯ,ಪ್ರಾಥಮಿಕ ಶಿಕ್ಷಣ ಮತ್ತು ಜೀವನೋಪಾಯ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಕಪ್ಪುಹಣವನ್ನು ಘೋಷಿಸದೆ ತೆರಿಗೆ ಅಧಿಕಾರಿಗಳ ಕೈಗೆ ಸಿಕ್ಕಿ1ಬಿದ್ದರೆ ಶೇ.60 ತೆರಿಗೆ,ತೆರಿಗೆಯ ಶೇ.25(ಶೇ.15)ರಷ್ಟು ಮೇಲ್ತೆರಿಗೆ....ಹೀಗೆ ಒಟ್ಟು ಶೇ.75ರಷ್ಟು ಮೊತ್ತವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ತೆರಿಗೆ ಅಧಿಕಾರಿಗಳು ಶೇ.10ರಷ್ಟು ದಂಡವನ್ನೂ ವಿಧಿಸಲು ನಿರ್ಧರಿಸಬಹುದು.