ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಆಕ್ರೋಶ ದಿನ

Update: 2016-11-28 13:00 GMT

ಮಂಗಳೂರು, ನ. 28: ಕೇಂದ್ರ ಸರಕಾರವು 500 ರೂ. ಹಾಗೂ 1000 ರೂ.ಗಳ ಹಳೆ ನೋಟುಗಳನ್ನು ಅಮಾನ್ಯಗೊಳಿಸಿ, ಸಮರ್ಪಕವಾಗಿ ಹೊಸ ನೋಟು ಪೂರೈಕೆಯಲ್ಲಿ ವಿಫಲವಾಗಿದೆ ಎಂದು ಆಪಾದಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು.

ನಗರದ ತಾಲೂಕು ಪಂಚಾಯತ್ ಕಚೇರಿ ಬಳಿಯ ಮಿನಿ ವಿಧಾನಸೌಧ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್ ಮಾತನಾಡಿ, ನೋಟು ರದ್ಧತಿಯಿಂದ ಭಾರತದ ಸಾರ್ವಜನಿಕ ವಲಯದ ಕಂಪನಿಗಳು ಪ್ರತಿದಿನ 7049 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಭಾರತ ರೂಪಾಯಿ ವೌಲ್ಯ ಡಾಲರ್ ಎದುರು ಐತಿಹಾಸಿಕ ಕುಸಿತ ಕಂಡಿದೆ ಎಂದು ಹೇಳಿದರು.

ಕಾರ್ಮಿಕರು ಬೀದಿಪಾಲಾಗುತ್ತಿದ್ದರೆ, ಲಕ್ಷಗಟ್ಟಲೆ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನೋಟು ರದ್ಧತಿ ಮೂಲಕ ದುರಹಂಕಾರಿ ವರ್ತನೆಯನ್ನು ತೋರಿದೆ. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಪ್ರಜಾಪ್ರಭುತ್ವ ವೌಲ್ಯಗಳನ್ನೂ ಕಡೆಗಣಿಸಿ ಸಾಮಾನ್ಯ ಜನರು, ಶ್ರಮ ಜೀವಿಗಳು, ದುಡಿಯುವ ವರ್ಗ ಹಾಗೂ ಮಧ್ಯಮ ವರ್ಗವನ್ನು ತೊಂದರೆಗೆ ಸಿಲುಕಿಸಿದೆ ಎಂದರು. 

ಪ್ರತಿಭಟನೆಯಲ್ಲಿ ಅರಫಾ ಮಂಚಿ, ಅನ್ವರ್ ಅಲಿ ಕಾಪು, ಝಾಹೀದ್ ಹುಸೇನ್ ಮೊದಲಾದವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News