×
Ad

ಅಹ್ಮದಾಬಾದ್: ಗುಜರಾತ್ ಐಪಿಎಸ್ ಅಧಿಕಾರಿಯ ಪುತ್ರಿಯ ಮೇಲೆ ಹಲ್ಲೆ

Update: 2016-11-28 19:04 IST

ಅಹ್ಮದಾಬಾದ್, ನ. 28: ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದ ಸಿಬಿಐ ತನಿಖೆಯ ನೇತೃತ್ವ ವಹಿಸಿದ್ದ ಐಪಿಎಸ್ ಅಧಿಕಾರಿ ಸತೀಶ್ ವರ್ಮರ ಪುತ್ರಿಯ ಮೇಲೆ ರವಿವಾರ ಮಧ್ಯ ರಾತ್ರಿಯ ಬಳಿಕ ಅಜ್ಞಾತ ವ್ಯಕ್ತಿಯೊಬ್ಬ ಅವರ ಮನೆಯಲ್ಲೇ ಹಲ್ಲೆ ನಡೆಸಿದ್ದಾನೆ.

ಘಟನೆಯ ವೇಳೆ 17ರ ಹರೆಯದ ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು. ಆಕೆ ಲಘು ಗಾಯಗಳೊಂದಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಸಮರ್ಪಣ್ ಟವರ್‌ನ ಐಪಿಎಸ್ ಅಧಿಕಾರಿಗಳ ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದೆ.
ತನ್ನ ಮೇಲೆ ಅಪರಿಚಿತ ವ್ಯಕ್ತಿ ದಾಳಿ ನಡೆಸಿರುವ ಕುರಿತು ವರ್ಮರ ಪುತ್ರಿ ಗುಜರಾತ್ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮಧ್ಯರಾತ್ರಿಯ ಬಳಿಕ 1:30ರ ವೇಳೆ, ಮನೆಯಲ್ಲಿ ಯಾರೋ ಇದ್ದಾರೆಂಬ ಭಾವನೆ ತನಗೆ ಮೂಡಿತು. ಆತ ತನ್ನ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಲು ಪ್ರಯತ್ನಿಸಿದನು. ತಾನು ರಕ್ಷಿಸಿಕೊಳ್ಳಲು ಸರ್ವ ಶಕ್ತಿಯನ್ನು ಉಪಯೋಗಿಸಿದೆ. ಘರ್ಷಣೆಯ ಬಳಿಕ ಅಪರಿಚಿತ ಪರಾರಿಯಾದನೆಂದು ವರ್ಮರ ಪುತ್ರಿ ವಿವರಿಸಿದ್ದಾಳೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಆಕೆಯ ಬೆರಳಿಗೆ ಸಣ್ಣ ಗಾಯವಾಗಿದೆ. ಆದರೆ, ಅದು ಹೇಗಾಯಿತೆಂದು ಆಕೆಗೆ ತಿಳಿದಿಲ್ಲವೆಂದು ಪೊಲೀಸರು ಹೇಳಿದ್ದಾರೆ.
ದಾಳಿಕಾರ ಪರಾರಿಯಾದೊಡನೆ ಹುಡುಗಿ ನೆರೆಹೊರೆಯವರನ್ನೆಬ್ಬಿಸಿದ್ದಳು. ಅವರು ಪೊಲೀಸರಿಗೆ ಮಾಹಿತಿ ನೀಡಿದರೆಂದು ದೂರಿನಲ್ಲಿ ತಿಳಿಸಲಾಗಿದೆ.
ಗುಜರಾತ್ ವಿವಿ ಪೊಲೀಸ್‌ಠಾಣೆ ದೂರಿನ ಕುರಿತು ಪರಿಶೀಲಿಸುತ್ತಿದೆ. ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು. ದೂರಿನ ಹಿನ್ನಲೆಯಲ್ಲಿ ಸಮರ್ಪಣ್ ಟವರ್‌ನ ಲಿಫ್ಟ್ ಮ್ಯಾನ್ ಹಾಗೂ ಅಲ್ಲಿ ನಿಯೋಜಿಸಲಾಗಿರುವ ರಾಜ್ಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಆ ರಾತ್ರಿ ಅವರು ಏನನ್ನೂ ಕಂಡಿಲ್ಲವೆಂದಿದ್ದಾರೆ. ತಮಗಿನ್ನೂ ಯಾವುದೇ ಸುಳಿವು ಲಭಿಸಿಲ್ಲವೆಂದು ಅಹ್ಮದಾಬಾದ್‌ನ ಪೊಲೀಸ್ ಆಯುಕ್ತ ಎ.ಕೆ.ಸಿಂಗ್ ಹೇಳಿದ್ದಾರೆ.


ಮನೆಯೊಳಗೆ ಎರಡು ತೂತುಗಳಿದ್ದ ಪ್ಲಾಸ್ಟಿಕ್ ಚೀಲವೊಂದು ಪತ್ತೆಯಾಗಿದೆ. ಬಹುಶಃ ದುಷ್ಕರ್ಮಿ ಅದನ್ನು ಮುಖವಾಡವಾಗಿ ಬಳಸಿರಬಹುದೆಂದು ಶಂಕಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಲು ವರ್ಮ ನಿರಾಕರಿಸಿದ್ದಾರೆ. ತ್ರಿಪುರದಲ್ಲಿ ಸಿಆರ್‌ಪಿಎಫ್ ಮಹಾ ನಿರೀಕ್ಷಕರಾಗಿರುವ ಅವರು ರವಿವಾರ ರಾತ್ರಿಯೇ ಮನೆಗೆ ಧಾವಿಸಿದ್ದಾರೆ. ಘಟನೆಯು ನಗರ ಪೊಲೀಸರನ್ನು ಗೊಂದಲಕ್ಕೆ ಸಿಲುಕಿಸಿದೆ.


ಇಶ್ರತ್ ಜಹಾನ್ ಹತ್ಯೆಯ ತನಿಖೆಯ ವೇಳೆ ವರ್ಮ, ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸರಕಾರವನ್ನು ಎದುರು ಹಾಕಿಕೊಂಡಿದ್ದರು. ಅವರನ್ನು ಕೇಂದ್ರದ ನಿಯೋಜತೆಯ ಮೇಲೆ ಮೊದಲು ಶಿಲ್ಲಾಂಗ್‌ಗೆ ಆ ಬಳಿಕ ಎರಡೇ ವರ್ಷಗಳೊಂದಿಗೆ ತ್ರಿಪುರಕ್ಕೆ ವರ್ಗಾವಣೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News