ಬಂಟ್ವಾಳ: ಘನತ್ಯಾಜ್ಯ ವಿಲೇವಾರಿಗೆ 1.60 ಕೋಟಿ ರೂ.ಯೋಜನೆ ಸಿದ್ಧ

Update: 2016-11-28 14:08 GMT

ಬಂಟ್ವಾಳ, ನ.28: ರಸ್ತೆಯ ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಎಸೆಯುವವರ ವಿರುದ್ಧ ದಂಡನೆಯಂತ ಕಠಿಣ ಕ್ರಮ ಕೈಗೊಳ್ಳಬೇಕು. ಪುರಸಭಾ ವ್ಯಾಪ್ತಿಯಲ್ಲಿ ರಸ್ತೆಯನ್ನು ಅತಿಕ್ರಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ಪಾದಚಾರಿಗಳಿಗೆ ಪುಟ್‌ಪಾತ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ವ್ಯವಸ್ಥಿತ ಪೇ ಪಾರ್ಕಿಂಗ್‌ಗೆ ಸ್ಥಳ ಒದಗಿಸಬೇಕು ಸೇರಿದಂತೆ ಹಲವು ಸಲಹೆಗಳು ಸೋಮವಾರ ಬಂಟ್ವಾಳ ಪುರಸಭೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಕೇಳಿ ಬಂತು.

ಸಭೆಯಲ್ಲಿ ಪುರಸಭಾ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ತಮ್ಮ ಸಲಹೆ, ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್, ಪುರಸಭಾ ವ್ಯಾಪ್ತಿಯ ಅಭಿವೃದ್ಧಿಗೆ ಪೂರಕ ಸಲಹೆಗಳನ್ನು ನೀಡಿದರೆ ಮುಂದಿನ ಪುರಸಭೆಯ ಬಜೆಟ್‌ನಲ್ಲಿ ಅಳವಡಿಸಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದರು.

ತ್ಯಾಜ್ಯ ಎಸೆಯಲ್ಪಡುವ ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಜೊತೆಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವೂ ಆಗಬೇಕು. ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಸಾವಿರಾರು ರೂ. ದಂಡ ವಿಧಿಸುವ ನಿಟ್ಟಿನಲ್ಲಿ ಪುರಸಭೆ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತಲ್ಲದೆ ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕೆಂಬ ಸಲಹೆ ಕೇಳಿಬಂತು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್ ಭಟ್, ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಮುಂದಿನ ವರ್ಷಕ್ಕೆ 1.60 ಕೋಟಿ ರೂ. ಯೋಜನೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಇದನ್ನು ಗುತ್ತಿಗೆದಾರರ ಮೂಲಕ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದ ಅವರು, ಅಕ್ರಮ ನೀರು ಸಂಪರ್ಕ ಹೊಂದಿರುವವರನ್ನು ಸಕ್ರಮಗೊಳಿಸಿ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ಸಾಮಾನ್ಯ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪುರಸಭಾ ವ್ಯಾಪ್ತಿಯ ರಸ್ತೆಯನ್ನು ಅತಿಕ್ರಮಣಗೊಳಿಸಿರುವ ಅಂಗಡಿ, ಕಟ್ಟಡಗಳನ್ನು ತೆರವುಗೊಳಿಸಬೇಕು. ಪಾದಚಾರಿಗಳು ಸುಗಮ ಸಂಚಾರಕ್ಕೆ ಝೀಬ್ರಾ ಕ್ರಾಸಿಂಗ್, ಪೇ ಪಾರ್ಕಿಂಗ್ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಬಿ.ಸಿ.ರೋಡಿನ ಶೇ. 75ರಷ್ಟು ಸಮಸ್ಯೆ ಬಗೆಹರಿದಂತೆ ಎಂದು ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಅಭಿಪ್ರಾಯಪಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಅವರು, ಬಿ.ಸಿ.ರೋಡ್‌ನ ಸಮಗ್ರ ಚಿತ್ರಣ ಬದಲಿಸಲು ಜಿಲ್ಲಾಧಿಕಾರಿ ಯುದ್ದೋಪಾದಿಯಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದು ಮುಂದಿನ ಒಂದು ತಿಂಗಳ ಒಳಗಾಗಿ ಇದು ಪೂರ್ಣಗೊಳ್ಳಲಿದೆ. ಇದಕ್ಕೆ ಸಾರ್ವಜನಿಕರು ಕೂಡಾ ಸಹಕರಿಸಬೇಕೆಂದು ಮನವಿ ಮಾಡಿದರು.

ಈಗಾಗಲೇ ಕೋಟ್ಯಾಂತರ ರೂ. ವೆಚ್ಚದಲ್ಲಿ ಜಾರಿಯಾಗಿ ಈಗ ನೆನೆಗುದಿಗೆ ಬಿದ್ದಿರುವ ಪುರಸಭಾ ವ್ಯಾಪ್ತಿಯ ಸಮಗ್ರ ಒಳ ಚರಂಡಿ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆಯ ನಿವೃತ್ತ ಮುಖ್ಯಾಧಿಕಾರಿ ಶಿವಶಂಕರ್ ಕೆ. ರಾವ್ ಸಭೆಯ ಗಮನ ಸೆಳೆದರು. ಈ ಯೋಜನೆಯ ಕಾಮಗಾರಿ ಆರಂಭವಾಗುವ ನಿಟ್ಟಿನಲ್ಲಿ ಸಚಿವ ರಮಾನಾಥ ರೈ ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಾಧಿಕಾರಿ ಸ್ಪಷ್ಟಪಡಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ಡಾ. ಮಹಾಬಲೇಶ್ವರ ಹೆಬ್ಬಾರ್, ಎಸ್.ಪಟವರ್ಧನ್, ಲಯನ್ ಡಾ. ವಸಂತ ಬಾಳಿಗಾ, ದಾಮೋದರ್, ಸುಭಾಶ್ಚಂದ್ರ ಜೈನ್, ಗಿರೀಶ್ ಪೈ ಬಂಟ್ವಾಳ ಮತ್ತಿತರರು ವಿಷಯ ಮಂಡಿಸಿದರು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಪೂರಕ ಮಾಹಿತಿ ನೀಡಿದರು. ಸಮುದಾಯ ಅಧಿಕಾರಿ ಮತ್ತಡಿ ಹಾಗೂ ಪುರಸಭೆಯ ಇಲಾಖಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News