ಸರಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಲಭ್ಯವಾಗಿಸಿದ ಆದರ್ಶ ವೈದ್ಯ

Update: 2016-11-28 14:29 GMT
ಸಾಂದರ್ಭಿಕ ಚಿತ್ರ

ಮುಂಬೈ,ನ.28: ಸದಾ ಸೌಲಭ್ಯಗಳ ಕೊರತೆ ಕಾಡುತ್ತಿರುವ ಸರಕಾರಿ ಆಸ್ಪತ್ರೆಗಳೆಂದರೆ ಹೆಚ್ಚಿನವರಿಗೆ ಅಲರ್ಜಿ. ಆದರೆ ಮುಂಬೈನ ಸರಕಾರಿ ಆಸ್ಪತ್ರೆಯೊಂದು ಕ್ಯಾನ್ಸರ್ ಚಿಕಿತ್ಸೆಗೆ ಅಗ್ಗದ ಮತ್ತು ಅತ್ಯಾಧುನಿಕ ರೇಡಿಯೊಥೆರಪಿ ಸೌಲಭ್ಯವನ್ನು ಕಲ್ಪಿಸುವ ಮೂಲಕ ಬಡ ಕ್ಯಾನ್ಸರ್ ರೋಗಿಗಳ ಪಾಲಿಗೆ ವರದಾನವಾಗಿದೆ.


ಮಹಾರಾಷ್ಟ್ರ ಸರಕಾರದ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಗಳು, ಗ್ರಾಂಟ್ ಸರಕಾರಿ ವೈದಕೀಯ ಕಾಲೇಜು ಮತ್ತು ಜೆಜೆ ಗ್ರುಪ್ ಆಫ್ ಹಾಸ್ಪಿಟಲ್ಸ್‌ನಲ್ಲಿ ಸಹಾಯಕ ಪ್ರೊಫೆಸರ್ ಹಾಗೂ ರೇಡಿಯೊಥೆರಪಿ ಮತ್ತು ಕ್ಯಾನ್ಸರ್ ವಿಭಾಗದ ಮುಖ್ಯಸ್ಥರಾಗಿರುವ ದಿಲೀಪ್ ನಿಕಂ ಈ ಸಾಧನೆಯ ಹಿಂದಿನ ರೂವಾರಿಯಾಗಿದ್ದಾರೆ.


ಸರಕಾರಿ ಆಸ್ಪತ್ರೆಗಳಲ್ಲಿಯೂ ಅತ್ಯಾಧುನಿಕ ಯಂತ್ರಗಳು ಮತ್ತು ಅತ್ಯುತ್ತಮ ಚಿಕಿತ್ಸೆ ಯನ್ನು ಪಡೆಯಬಹುದಾಗಿದೆ ಎಂಬ ಸಂದೇಶವನ್ನು ರೋಗಿಗಳು ಮತ್ತು ಅವರ ಬಂಧುಗಳಿಗೆ ರವಾನಿಸುವ ಪ್ರಯತ್ನ ನನ್ನದಾಗಿತ್ತು. ಕ್ಯಾನ್ಸರ್ ಚಿಕಿತ್ಸೆಗೆ ಉತ್ತಮ ಮೂಲಸೌಕರ್ಯಗಳ ಅಗತ್ಯವಿದೆ ಎಂದು ಸರಕಾರದ ಹಿರಿಯ ಅಧಿಕಾರಿಗಳಿಗೆ ಮನದಟ್ಟು ಮಾಡಿದ ಬಳಿಕ ಕ್ಯಾನ್ಸರ್ ಚಿಕಿತ್ಸೆಗಾಗಿ ಅತ್ಯಾಧುನಿಕ ವಿಭಾಗವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಮೂಲತಃ ಮರಾಠವಾಡಾದ ಉಸ್ಮಾನಾಬಾದ್ ಜಿಲ್ಲೆಯವರಾಗಿರುವ ನಿಕಂ(36) ತಿಳಿಸಿದರು.


ಕ್ಯಾನ್ಸರ್ ಚಿಕಿತ್ಸೆ ದಿನೇದಿನೇ ದುಬಾರಿಯಾಗುತ್ತಿದೆ. ಹೆಚ್ಚಿನ ಕ್ಯಾನ್ಸರ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಶಸ್ತ್ರಚಿಕಿತ್ಸೆ,ಕಿಮೊಥೆರಪಿ ಮತ್ತು ರೇಡಿಯೊಥೆರಪಿ ಸೇರಿದಂತೆ ಬಹುವಿಧಾನಗಳ ಚಿಕಿತ್ಸೆಯನ್ನು ಕ್ಯಾನ್ಸರ್ ರೋಗಿ ಗಳಿಗೆ ನೀಡಲಾಗುತ್ತದೆ. ಬೃಹತ್ ಹೂಡಿಕೆ ಅಗತ್ಯವಾಗಿರುವುದರಿಂದ ಹೆಚ್ಚಿನ ಆಸ್ಪತ್ರೆಗಳಲ್ಲಿ ರೇಡಿಯೊಥೆರಪಿ ಸೌಲಭ್ಯಗಳಿಲ್ಲ. ಮುಂಬೈ,ನವಿಮುಂಬೈ ಮತ್ತು ಥಾಣೆ ವ್ಯಾಪ್ತಿಯಲ್ಲಿ ಟಾಟಾ ಸ್ಮಾರಕ ಆಸ್ಪತ್ರೆ ಹೊರತುಪಡಿಸಿದರೆ ಸರಕಾರಿ ಆಸ್ಪತ್ರೆಗಳಲ್ಲಿ ಲೀನಿಯರ್ ಆ್ಯಕ್ಸಲರೇಟರ್ ರೇಡಿಯೊಥೆರಪಿ ಸೌಲಭ್ಯವು ಲಭ್ಯವಿಲ್ಲ ಎಂದು ಅವರು ಹೇಳಿದರು.


 ಆಸ್ಪತ್ರೆಯ ರೇಡಿಯೊಥೆರಪಿ ವಿಭಾಗದಲ್ಲಿ ಪ್ರತಿ ದಿನ 70 ರಿಂದ 80 ರಷ್ಟು ಬಡ ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜೀವ ಗಾಂಧಿ ಯೋಜನೆಯಡಿ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಮತ್ತು ಇತರರಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಕನಿಷ್ಠ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದರು.


ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರು ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿಯ ಕೆಲಸಗಳನ್ನು ಕಂಡು ಪ್ರಭಾವಿತರಾದ ಬಳಿಕ ರಾಜ್ಯ ಸರಕಾರವು 2012ರಲ್ಲಿ ನಿಕಂ ಅವರಿಗೆ ಪ್ರಶಂಸಾಪತ್ರವನ್ನು ನೀಡಿ ಗೌರವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News