ಮೇಯರ್ ಗೈರಿನಲ್ಲಿ ಮನಪಾ ಬಜೆಟ್ ಸಿದ್ಧತಾ ಸಭೆ!

Update: 2016-11-28 15:07 GMT

ಮಂಗಳೂರು, ನ.28: ಮೇಯರ್ ಹರಿನಾಥ್ ಗೈರುಹಾಜರಿ ಹಾಗೂ ಬೆರಳೆಣಿಕೆಯ ಸಾರ್ವಜನಿಕರೊಂದಿಗೆ ಇಂದು ಮಂಗಳೂರು ಮಹಾನಗರ ಪಾಲಿಕೆಯ 2017-18ನೆ ಸಾಲಿನ ಬಜೆಟ್‌ನ ಸಿದ್ಧಪಡಿಸುವ ಕುರಿತು ಸಾರ್ವಜನಿಕರಿಂದ ಸಲಹೆ ಸ್ವೀಕರಿಸುವ ಸಭೆ ನಡೆಯಿತು.

ಇಂದು ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಸಭೆ ಸುಮಾರು ಅರ್ಧ ಗಂಟೆಯಾದರೂ ಕೋರಂ ಇಲ್ಲದೆ ಆರಂಭವಾಗಲಿಲ್ಲ. ಕೊನೆಗೆ ಅರ್ಧ ತಾಸಿನ ಬಳಿಕ ಕೆಲ ಸದಸ್ಯರು ಹಾಗೂ ಬೆರಳೆಣಿಕೆಯ ಸಾರ್ವಜನಿಕರ ಆಗಮನದೊಂದಿಗೆ ಆಯುಕ್ತರು ಸಭೆಯನ್ನು ಆರಂಭಿಸಿದರು.

ದೂರವಾಣಿ ಕೇಬಲ್‌ಗಳಿಗೆ ನೆಲಬಾಡಿಗೆಗೆ ಸಲಹೆ

ಮನಪಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ವಿವಿಧ ಕಂಪನಿಗಳು ಅಳವಡಿಸುವ ಭೂಗತ ಕೇಬಲ್‌ಗಳಿಗೆ ನೆಲಬಾಡಿಗೆ ವಿಧಿಸಬೇಕು. ಬಸ್ಸು ತಂಗುದಾಣಗಳ ನಿರ್ಮಾಣ, ರಸ್ತೆಗಳ ನಡುವೆ ಕಬ್ಬಿಣದ ಗ್ರಿಲ್ ಅಳವಡಿಕೆ ಮೊದಲಾದ ಸಲಹೆಗಳು ಸಭೆಯಲ್ಲಿ ಸಾರ್ವಜನಿಕಪರಿಂದ ವ್ಯಕ್ತವಾಯಿತು.

ನಾಗರಿಕ ಹಿತರಕ್ಷಣಾ ಸಮಿತಿಯ ಸಂಚಾಲಕ ಹನುಮಂತ ಕಾಮತ್ ಅಭಿಪ್ರಾಯಿಸುತ್ತಾ, ಭೂಗತ ಕೇಬಲ್‌ಗಲಿಗೆ ನೆಬಾಡಿಗೆ ನಿಗದಿಪಡಿಸಿದರೆ ಮನಪಾಕ್ಕೆ ಗರಿಷ್ಠ ಮಟ್ಟದಲ್ಲಿ ಆದಾಯ ಬರಲಿದೆ ಎಂದು ಸಲಹೆ ನೀಡಿದರು. ಸಮಾಜ ಸೇವಕ ಜಿ.ಕೆ. ಭಟ್‌ರವರು, ಫುಟ್‌ಪಾತ್‌ಗಳನ್ನು ವ್ಯವಸ್ಥಿತವಾಗಿ ರೂಪಿಸಲು ಈಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಆಗ್ರಹಿಸಿದರು.

ಕಂದಾಯ ವಿಭಾಗದಲ್ಲಿ ಸೋರಿಕೆ ತಡೆಗಟ್ಟುವುದು, ಮನೆಗಳನ್ನು ನವೀಕರಣ ಪರವಾನಿಗೆ ಪಡೆದು ಹೊಸ ಮನೆಗಳ ನಿರ್ಮಾಣದ ತಂತ್ರವನ್ನು ತಡೆಗಟ್ಟುವುದು, ಉದ್ದಿಮೆ ಪರವಾನಿಗೆಗಳನ್ನು ಪಾರದರ್ಶಕಗೊಳಿಸಿ ವ್ಯವಸ್ಥಿತಗೊಳಿಸುವುದು, ಸ್ವಯಂಘೋಷಿತ ಆಸ್ತಿ ತೆರಿಗೆ ಸಲ್ಲಿಕೆಯನ್ನು ಪರಿಶೀಲಿಸುವುದು ಮುಂತಾದ ಕ್ರಮಗಳಿಂದ ಪಾಲಿಕೆಗೆ ಹಲವಾರು ಕೋ.ರೂ.ಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಲು ಸಾಧ್ಯವಿದೆ ಎಂಬ ಹಲವು ಸಲಹೆಗಳು ಸಾರ್ವಜನಿಕರಿಂದ ವ್ಯಕ್ತವಾಯಿತು.

ಮನಪಾ ಆಯುಕ್ತ ಮಹಮ್ಮದ್ ನಝೀರ್ ಪ್ರತಿಕ್ರಿಯಿಸಿ, ಸ್ವಯಂಘೋಷಿತ ಆಸ್ತಿ ವಿವರಗಳನ್ನು ಪರಿಶೀಲಿಸುವ ಕಾರ್ಯ ಪ್ರಾರಂಭವಾಗಲಿದೆ. ನಗರದಲ್ಲಿ ಕಾವೂರು, ಉರ್ವಾ ಮಾರ್ಕೆಟ್ ಮಾರುಕಟ್ಟೆಗಳ ಕಾಮಗಾರಿ ಪ್ರಾರಂಭವಾಗಿದೆ. ಕದ್ರಿ ಮತ್ತು ಕಂಕನಾಡಿ ಮಾರುಕಟ್ಟೆಗಳ ನಿರ್ಮಾಣ ಕುರಿತಂತೆ ಕೆಐಡಿಸಿಎಲ್‌ಗೆ ವಹಿಸಿಕೊಡಲಾಗಿದೆ. ಅಳಕೆಯಲ್ಲಿ ಟೆಂಡರ್ ಪ್ರಕ್ರಿಯಯಲ್ಲಿದೆ ಎಂದು ಹೇಳಿದರು.

ವಿಪಕ್ಷ ನಾಯಕಿ ರೂಪಾ ಡಿ.ಬಂಗೇರ, ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಸುಧೀರ್ ಶೆಟ್ಟಿ ಕಣ್ಣೂರು ಮುಂತಾದವರು ಸಲಹೆಗಳನ್ನು ನೀಡಿದರು. ಉಪಮೇಯರ್ ಸುಮಿತ್ರಾ ಕರಿಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News