ವಿಚಾರಣೆ ಎದುರಿಸಲು ನಿರಾಕರಿಸಿದ ದಕ್ಷಿಣ ಕೊರಿಯ ಅಧ್ಯಕ್ಷೆ
ಸಿಯೋಲ್, ನ. 28: ತನಗೆ ತಳುಕುಹಾಕಿಕೊಂಡಿರುವ ಬೃಹತ್ ಹಗರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಟರ್‌ಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ದಕ್ಷಿಣ ಕೊರಿಯದ ಅಧ್ಯಕ್ಷೆ ಪಾರ್ಕ್ ಗುಯನ್ ಹೈ ನಿರಾಕರಿಸಿದ್ದಾರೆ ಎಂದು ಅವರ ವಕೀಲ ಸೋಮವಾರ ತಿಳಿಸಿದ್ದಾರೆ.
ಪಾರ್ಕ್ ಮತ್ತು ಅವರ ಸ್ನೇಹಿತೆ ಚೋಯ್ ಸೂನ್-ಸಿಲ್ ಆರ್ಥಿಕ ಹಗರಣದಲ್ಲಿ ಸಹ ಆರೋಪಿಗಳು ಎಂಬುದಾಗಿ ಪ್ರಾಸಿಕ್ಯೂಟರ್‌ಗಳು ಬಣ್ಣಿಸಿದ್ದಾರೆ. ತನ್ನ ಹೆಸರಿನಲ್ಲಿರುವ ದತ್ತಿ ಸಂಸ್ಥೆಗಳಿಗೆ ದೇಣಿಗೆ ನೀಡುವಂತೆ ಚೋಯ್ ದಕ್ಷಿಣ ಕೊರಿಯದ ಬೃಹತ್ ಕಂಪೆನಿಗಳ ಮೇಲೆ ಒತ್ತಡ ಹೇರಿದ್ದರು ಹಾಗೂ ಇದಕ್ಕಾಗಿ ಅವರು ಅಧ್ಯಕ್ಷೆಯ ಹೆಸರನ್ನು ಬಳಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಈ ಮೂಲಕ ಅವರ ಟ್ರಸ್ಟ್‌ಗೆ 60 ಮಿಲಿಯ ಡಾಲರ್ (ಸುಮಾರು 412 ಕೋಟಿ ರೂಪಾಯಿ) ದೇಣಿಗೆ ಹರಿದು ಬಂದಿತ್ತು ಹಾಗೂ ಚೋಯ್ ಅದನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.
ಚೋಯ್ ವಿರುದ್ಧ ಬಲವಂತ ಮತ್ತು ಅಧಿಕಾರ ದುರುಪಯೋಗ ಆರೋಪಗಳನ್ನು ಕಳೆದ ವಾರ ಹೊರಿಸಲಾಗಿದೆ.ಈ ಹಗರಣದ ಬಳಿಕ ದೇಶದ ಜನರು ಅಧ್ಯಕ್ಷೆಯ ವಿರುದ್ಧ ತಿರುಗಿ ಬಿದ್ದಿದ್ದು, ಅವರ ರಾಜೀನಾಮೆಗಾಗಿ ಆಗ್ರಹಿಸಿ ದೇಶಾದ್ಯಂತ ಭಾರೀ ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.