ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯ ಮುಸ್ಲಿಮರ ವಿರುದ್ಧ ಸೈನಿಕರ ದೌರ್ಜನ್ಯ

Update: 2016-11-28 15:05 GMT

ಯಾಂಗನ್, ನ. 28: ರೊಹಿಂಗ್ಯ ಮುಸ್ಲಿಮರ ಮೇಲೆ ಮ್ಯಾನ್ಮಾರ್ ನಡೆಸುತ್ತಿರುವ ದೌರ್ಜನ್ಯಗಳನ್ನು ಪ್ರತಿಭಟಿಸಿ ಇಂಡೋನೇಶ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಆ ದೇಶಕ್ಕೆ ನೀಡಬೇಕಿರುವ ಭೇಟಿಯನ್ನು ಮ್ಯಾನ್ಮಾರ್‌ನ ನಾಯಕಿ ಆಂಗ್ ಸಾನ್ ಸೂ ಕಿ ಸೋಮವಾರ ಮುಂದೂಡಿದ್ದಾರೆ.

ಇಂಡೋನೇಶ್ಯದ ರಾಜಧಾನಿ ಜಕಾರ್ತದಲ್ಲಿರುವ ಮ್ಯಾನ್ಮಾರ್‌ನ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸುವ ವಿಫಲ ಪ್ರಯತ್ನವನ್ನೂ ಮಾಡಲಾಗಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.

ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ಸಾವಿರಾರು ರೊಹಿಂಗ್ಯ ಮುಸ್ಲಿಮರು ಕಳೆದ ವಾರ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದರು. ಮ್ಯಾನ್ಮಾರ್‌ನ ಸೇನೆಯು ತಮ್ಮ ಮೇಲೆ ದೌರ್ಜನ್ಯ ನಡೆಸಿ ತಮ್ಮನ್ನು ಬಾಂಗ್ಲಾದೇಶಕ್ಕೆ ಅಟ್ಟಿದೆ ಎಂಬುದಾಗಿ ಸ್ವಂತ ದೇಶ ಹೊಂದಿಲ್ಲದ ರೊಹಿಂಗ್ಯ ಮುಸ್ಲಿಮರು ಆರೋಪಿಸಿದ್ದಾರೆ.

ಮ್ಯಾನ್ಮಾರ್ ಸೈನಿಕರು ಪುರುಷರು ಮತ್ತು ಮಕ್ಕಳನ್ನು ಕೊಲ್ಲುತ್ತಿದ್ದಾರೆ ಹಾಗೂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುತ್ತಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ.

ಮ್ಯಾನ್ಮಾರ್ ರೊಹಿಂಗ್ಯ ಮುಸ್ಲಿಮರ ‘ಸಂತತಿ ನಾಶ’ದಲ್ಲಿ ವ್ಯವಸ್ಥಿತವಾಗಿ ತೊಡಗಿಸಿಕೊಂಡಿದೆ ಎಂಬುದಾಗಿ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಆರೋಪಿಸಿದ ಬಳಿಕ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸೂ ಕಿ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಿದೆ.
ಈ ಆರೋಪಗಳನ್ನು ನಿರಾಕರಿಸಿರುವ ಸೂ ಕಿ ಸರಕಾರ, ಕಳೆದ ತಿಂಗಳು ಪೊಲೀಸ್ ಠಾಣೆಗಳ ಮೇಲೆ ಭೀಕರ ದಾಳಿ ನಡೆಸಿದ ‘ಭಯೋತ್ಪಾದಕರನ್ನು’ ಸೇನೆ ನಿಭಾಯಿಸುತ್ತಿದೆ ಎಂದು ಹೇಳಿದೆ.

ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ರಖೈನ್ ರಾಜ್ಯದ ಉತ್ತರ ಭಾಗದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲು ವಿದೇಶಿ ಪತ್ರಕರ್ತರು ಮತ್ತು ಸ್ವತಂತ್ರ ತನಿಖಾ ಸಂಸ್ಥೆಗಳಿಗೆ ಮ್ಯಾನ್ಮಾರ್ ಈಗ ಅನುಮತಿ ನಿರಾಕರಿಸಿದೆ.

ರೊಹಿಂಗ್ಯ ಮುಸ್ಲಿಮರ ಮೇಲೆ ನಡೆಸಲಾಗುತ್ತಿದೆ ಎನ್ನಲಾದ ದೌರ್ಜನ್ಯದ ವಿರುದ್ಧ ಕಳೆದ ವಾರ ಇಂಡೋನೇಶ್ಯದಲ್ಲಿ ನೂರಾರು ಪ್ರತಿಭಟನಕಾರರು ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ. ಮ್ಯಾನ್ಮಾರ್‌ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂಬುದಾಗಿ ಪ್ರತಿಭಟನಕಾರರು ಇಂಡೋನೇಶ್ಯ ಸರಕಾರವನ್ನು ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News