ಮೂಢನಂಬಿಕೆ ವಿರೋಧಿ ಪರಿವರ್ತನಾ ಜಾಥ ಉಡುಪಿಗೆ

Update: 2016-11-28 15:31 GMT

ಉಡುಪಿ, ನ.28:ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಡಿ.6 ರಂದು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿರುವ ಮೂಢನಂಬಿಕೆ ವಿರೋಧಿ ಪರಿವರ್ತನಾ ದಿನಾಚರಣೆಯ ಪ್ರಚಾರ ಜಾಥವು ಸೋಮವಾರ ಉಡುಪಿಗೆ ಆಗಮಿಸಿತು.

ಶಿಕ್ಷಣ ತಜ್ಞ ಡಾ.ನೇರಿ ಕರ್ನೆಲಿಯೋ ಮಾತನಾಡಿ, ಬಹುಧರ್ಮೀಯರು ಇರುವ ಈ ದೇಶದ ಯುವ ಜನತೆ ಎಲ್ಲ ಧರ್ಮಗಳ ಸಾರವನ್ನು ಅರಿತು ಕೊಳ್ಳಬೇಕು. ಎಲ್ಲ ಧರ್ಮಗಳ ಶಕ್ತಿಯಾಗಿರುವ ಯುವಕರ ಮನಸ್ಸು ಶಾಂತಿ ಸೌಹಾರ್ದತೆಯ ಕಡೆ ಸಾಗಬೇಕು. ಬಣ್ಣದಲ್ಲಿ ಧ್ವೇಷ ಮಾಡದೆ ಭಾವನೆಯಲ್ಲಿ ಪ್ರೀತಿ ಬೆಳೆಸುವ ಕೆಲಸ ಆಗಬೇಕು ಎಂದು ಹೇಳಿದರು.

ಕಂದಾಚಾರ, ಮೂಢನಂಬಿಕೆಗಳಿಂದಾಗಿ ದೇಶದ ಪ್ರಗತಿ ಸಾಧ್ಯವಿಲ್ಲ. ಕೆಲ ವರು ತಮ್ಮ ಸ್ವಾರ್ಥ ಲಾಭಕ್ಕಾಗಿ ದಲಿತರು, ಹಿಂದುಳಿದವರ್ಗದವರ ಮೇಲೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಶೋಷಣೆಗಳನ್ನು ಮಾಡುತ್ತಿದ್ದಾರೆ. ನಾವು ಇದರಿಂದ ಮುಕ್ತರಾಗಿ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಸಂಚಾಲಕ ದಿನೇಶ್ ಕೋಟ್ಯಾನ್, ನಾಗೇಶ್ ಸುವರ್ಣ ಕಾಪು, ಸದಾನಂದ ಕಾರ್ಕಳ, ಸುಮಲತಾ ಇನ್ನಂಜೆ, ಜೋಸೆಫ್ ರೆಬೆಲ್ಲೊ, ರಾಜೇಶ್ ಪಡುಬಿದ್ರಿ, ರಿಚರ್ಡ್ ಡಯಸ್, ಪ್ರಭಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಾನಪ್ಪ ದಾವಣಗೆರೆ ನೇತೃತ್ವದಲ್ಲಿ ನಾರಾಯಣ ಗುರು ಕಲಾ ತಂಡದಿಂದ ಕ್ರಾಂತಿಗೀತೆಗಳನ್ನು ಹಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News