ಮಕ್ಕಳ ಅಪಹರಣ-ಶಾಲೆಗೆ ಬಾರದ ವಿದ್ಯಾರ್ಥಿಗಳು:ನೆಲ್ಲಿಕಾರು ಮಕ್ಕಳ ಗ್ರಾಮಸಭೆಯಲ್ಲಿ ಧ್ವನಿಯೆತ್ತಿದ ವಿದ್ಯಾರ್ಥಿ

Update: 2016-11-28 16:32 GMT

ಮೂಡುಬಿದಿರೆ, ನ.28: ಇತ್ತೀಚಿನ ದಿನಗಳಲ್ಲಿ ಮಕ್ಕಳ ಅಪಹರಣದ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿದ್ದು ಮಕ್ಕಳು ಶಾಲೆಗೆ ಬರಲು ಹೆದರುತ್ತಿದ್ದಾರೆ. ಈ ಬಗ್ಗೆ ಸರಿಯಾದ ಮಾಹಿತಿಯನ್ನು ತಮಗೆ ನೀಡಿ ಎಂದು ಮಾಂಟ್ರಾಡಿ ಸರಕಾರಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿ ಆದಿತ್ಯ ಆಗ್ರಹಿಸಿದ ಘಟನೆ ಸೋಮವಾರ ನೆಲ್ಲಿಕಾರಿನಲ್ಲಿ ನಡೆದಿದೆ.

ನೆಲ್ಲಿಕಾರು ಗ್ರಾಮ ಪಂಚಾಯತ್‌ನ ವತಿಯಿಂದ ಪಂಚಾಯತ್ ಸಭಾಭವನದಲ್ಲಿ ಸೋಮವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಮಕ್ಕಳ ಅಪಹರಣದ ಸುದ್ದಿಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದರಿಂದ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಲು ಹೆದರುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಪಣಪಿಲದಿಂದ ನೆಲ್ಲಿಕಾರು ಶಾಲೆಗೆ ಬರುವ ಮಕ್ಕಳಿಗೆ ಸಾರಿಗೆ ವ್ಯವಸ್ಥೆಯ ಅವಶ್ಯಕತೆಯಿದೆ. ಅಲ್ಲದೆ ಅದೇ ಪರಿಸರದ ವಿದ್ಯಾರ್ಥಿನಿಯೋರ್ವಳು ಪದೇಪದೇ ಶಾಲೆಗೆ ಹಾಜರಾಗುತ್ತಿಲ್ಲ. ಇದಕ್ಕೆ ಪಂಚಾಯತ್‌ನಿಂದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಶಿಕ್ಷಕಿಯೊಬ್ಬರು ಆಗ್ರಹಿಸಿದರು.

ಮಕ್ಕಳ ಅಪಹರಣದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಹೊರತು ನಮ್ಮೂರುಗಳಲ್ಲಿ ಅಂತಹ ಪ್ರಕರಣಗಳು ಕಂಡು ಬಂದಿಲ್ಲ. ಇದೆಲ್ಲಾ ಸುಳ್ಳು ಸುದ್ದಿ ಈ ಬಗ್ಗೆ ಮಕ್ಕಳು ಮತ್ತು ಹೆತ್ತವರು ತಲೆಕೆಡಿಸಿಕೊಳ್ಳಬೇಡಿ ಎಂದು ಮೂಡುಬಿದಿರೆ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಬಾಗದ ಪೊಲೀಸ್ ನಿರೀಕ್ಷಕ ಕುಶಾಲಪ್ಪ ಸಲಹೆ ನೀಡಿದರು.

ವಿದ್ಯಾರ್ಥಿನಿ ಶಾಲೆಗೆ ಹಾಜರಾಗದಿರುವುದರ ಬಗ್ಗೆ ಗ್ರಾಮಸಭೆಯ ಮೊದಲೇ ಪಂಚಾಯತ್‌ನ ಗಮನಕ್ಕೆ ಯಾಕೆ ತಂದಿಲ್ಲವೆಂದು ಸದಸ್ಯ ಶಶಿಧರ ಎಂ. ಪ್ರಶ್ನಿಸಿದರಲ್ಲದೆ, ವಿದ್ಯಾರ್ಥಿಗಳು ಶಾಲೆಗೆ ತಪ್ಪಿಸಿದರೆ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಹೇಳಿದರು. ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಪಂಚಾಯತ್‌ನಿಂದ ಕಷ್ಟಸಾಧ್ಯವಾಗಬಹುದು. ವಿದ್ಯಾರ್ಥಿನಿಯ ಸಮಸ್ಯೆಯ ಬಗ್ಗೆ ತಿಳಿಯಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಹಿತ ತಾನು ಕೂಡಾ ಮನೆಗೆ ಭೇಟಿ ನೀಡಲಾಗುವುದು. ಹಾಗೂ ಶಾಲೆಗೆ ಬರಲು ದೂರವಾಗುವುದಾದರೆ ಬೇರೆ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಗುವುದು ಎಂದು ಪಂಚಾಯತ್ ಅಧ್ಯಕ್ಷ ಜಯಂತ ಹೆಗ್ಡೆ ತಿಳಿಸಿದರು.

ಬೋರುಗುಡ್ಡೆ ಶಾಲೆಯ ಶೌಚಾಲಯ ದುರಸ್ತಿಗೆ ಪಂಚಾಯತ್‌ನಿಂದ ಅನುದಾನ ನೀಡುವಂತೆ, ನೆಲ್ಲಿಕಾರು ಸರಕಾರಿ ಶಾಲೆಯ ಶೌಚಾಲಯಕ್ಕೆ ಅರ್ಧಗೋಡೆ ಮಾತ್ರ ಇದ್ದು ಮೇಲ್ಛಾವಣಿ ಇಲ್ಲ ಇದನ್ನು ಸರಿಪಡಿಸುವಂತೆ, ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸುರಕ್ಷತಾ ಕಪಾಟುಗಳನ್ನು ನೀಡುವಂತೆ, ನೆಲ್ಲಿಕಾರು ಶಾಲೆಯ ಬಳಿ ರಸ್ತೆಯಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸುವಂತೆ, ಆಟದ ಮೈದಾನಕ್ಕೆ ಆವರಣಗೋಡೆ ನಿರ್ಮಿಸುವಂತೆ, ಪೆಂಚಾರು ಸರಕಾರಿ ಶಾಲೆಗೆ ತೆರೆದ ಬಾವಿ ಮತ್ತು ಆವರಣಗೋಡೆಯನ್ನು ನಿರ್ಮಿಸುವಂತೆ , ಮಾಂಟ್ರಾಡಿ ಶಾಲೆಯ ಸುತ್ತ ಅಳವಡಿಸಿರುವ ತಂತಿ ಬೇಲಿ ಕಿತ್ತು ಹೋಗಿದ್ದು ಒಳಗಡೆ ದನಗಳು ಬಂದು ತರಕಾರಿಗಳನ್ನು ತಿನ್ನುತ್ತಿದ್ದು ಇದಕ್ಕೆ ಆವರಣಗೋಡೆಯ ಅವಶ್ಯಕತೆ ಇದೆ ಎಂದು ಆಯಾಯ ಶಾಲೆಯ ವಿದ್ಯಾರ್ಥಿಗಳು ಪಂಚಾಯತ್‌ನ ಗಮನಕ್ಕೆ ತಂದರು.

ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಶಿಕ್ಷಣ ಇಲಾಖೆಯ ಗಮನಕ್ಕೆ ತನ್ನಿ, ಉಳಿದಂತೆ ಸಣ್ಣಪುಟ್ಟ ಕೊರತೆಗಳನ್ನು ಸ್ಥಳ ಪರಿಶೀಲನೆ ನಡೆಸಿ ಪಂಚಾಯತ್‌ನಿಂದ ಸರಿಪಡಿಸಲಾಗುವುದು. ಆದರೆ ತಮ್ಮ ಇಲಾಖೆಗಳಿಂದ ನೀಡುವ ದೃಢಪತ್ರವನ್ನು ಪಂಚಾಯತ್‌ಗೆ ನೀಡುವಂತೆ ಪಂಚಾಯತ್ ಅಧ್ಯಕ್ಷ ಜಯಂತ ಹೆಗ್ಡೆ ತಿಳಿಸಿದರು.

ನೆಲ್ಲಿಕಾರು ಶಾಲೆಯ ಶಿಕ್ಷಕ ಸುರೇಂದ್ರ ಅವರು ಮಾತನಾಡಿ ಸರ್ವ ಶಿಕ್ಷಣ ಅಭಿಯಾನದಡಿ ಅನುದಾನಗಳು ಸಿಗುತ್ತಿಲ್ಲ. ಆದ್ದರಿಂದ ಪಂಚಾಯತ್‌ನಿಂದಲೇ ಸರಿಪಡಿಸುವಂತೆ ವಿನಂತಿಸಿದರು.

ವಿದ್ಯಾರ್ಥಿನಿ ಸಂಧ್ಯಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವೈದ್ಯಾಧಿಕಾರಿ ಡಾ. ಭರತ್ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಣ ಇಲಾಖೆಯ ಸಿಆರ್‌ಪಿ ಸ್ಟೇನಿ ಪಿಂಟೊ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿದರು.

ತಾ.ಪಂ ಸದಸ್ಯೆ ರೇಖಾ ಸಾಲ್ಯಾನ್, ಉಪಾಧ್ಯಕ್ಷೆ ಕುಶಲ, ಪಿಡಿಒ ಪ್ರಶಾಂತ್ ಮತ್ತು ಪಂಚಾಯತ್ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News