ಮೋದಿಯಿಂದ ರಾತೋರಾತ್ರಿ ತುರ್ತು ಪರಿಸ್ಥಿತಿ ಹೇರಿಕೆ: ಭಾಸ್ಕರ ಕೋಡಿಂಬಾಳ

Update: 2016-11-28 18:07 GMT

ಪುತ್ತೂರು, ನ.28: ನೋಟು ನಿಷೇಧ ಹೆಸರಿನಲ್ಲಿ ಪ್ರಧಾನಿ ಮೋದಿಯಿಂದ ರಾತೋರಾತ್ರಿ ತುರ್ತು ಪರಿಸ್ಥಿತಿಯ ಹೇರಿಕೆಯಾಗಿದ್ದು, ಕಪ್ಪು ಹಣ ಬಳಸಿ ಅಧಿಕಾರಕ್ಕೆ ಬಂದ ಮೋದಿ ಇದೀಗ ಕಪ್ಪುಹಣದ ವಿರುದ್ಧ ಮಾತನಾಡುತ್ತಿರುವುದು ದುರಂತ ಎಂದು ಕಾಂಗ್ರೆಸ್ ಮುಖಂಡ ವಕೀಲ ಭಾಸ್ಕರ ಕೋಡಿಂಬಾಳ ಆರೋಪಿಸಿದರು.

ಅವರು ಸೋಮವಾರ ನೋಟು ನಿಷೇಧದಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಪ್ರತಿಪಕ್ಷಗಳು ಕರೆನೀಡಿರುವ ‘ಆಕ್ರೋಶ್ ದಿವಸ್’ ಅಂಗವಾಗಿ ಪುತ್ತೂರು ಬಸ್ ನಿಲ್ದಾಣದ ಮುಂಭಾಗದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಬಿಸಿಲಲ್ಲಿ ಕ್ಯೂ ನಿಂತು 70 ಜನ ದೇಶದಲ್ಲಿ ಸತ್ತಿದ್ದಾರೆ. ಆದರೂ ಸಂಭ್ರಮ ದಿನ ಎನ್ನುತ್ತಿರುವ ಬಿಜೆಪಿಗರು ಜನರ ಸಮಾಧಿ ಮೇಲೆ ಸಂಭ್ರಮಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾವ ಹಣದ ಮೂಲಕ ಅಧಿಕಾರ ಪಡೆದುಕೊಂಡಿತು. ಅವರು ನಡೆಸಿದ ಅಪರೇಶನ್ ಕಮಲ, ಗಣಿ ಹಗರಣ, ಸಿಬಿಐ ನ್ಯಾಯಾಧೀಶರಿಗೆ ಲಂಚ ನೀಡಿರುವ ಹಣ ಎಲ್ಲಿಂದ ಬಂದಿತ್ತು ಎಂಬ ಬಗ್ಗೆ ಬಿಜೆಪಿಗರು ಸಾರ್ವಜನಿಕರಿಗೆ ಉತ್ತರಿಸಬೇಕು ಎಂದ ಅವರು ಕೋಟಿಗಟ್ಟಲೆ ಹಣ ಇರುವ ಕುಳಗಳು ಬ್ಯಾಂಕಿನ ಮುಂದೆ ಕ್ಯೂ ನಿಂತಿಲ್ಲ. ಅವರು ತಮ್ಮ ಹಣವನ್ನು ಬೇರೆ ದಾರಿಯಲ್ಲಿ ಬಿಳಿ ಮಾಡುತ್ತಿದ್ದಾರೆ. ಬಡವರು, ಮಧ್ಯಮವರ್ಗದವರು ಮಾತ್ರ ದಿನಗಟ್ಟಲೆ ಕೆಲಸ ಬಿಟ್ಟು ಬ್ಯಾಂಕ್‌ಗಳ ಮುಂದೆ ಸಾಲು ನಿಂತಿದ್ದಾರೆ. ತಾವು ದುಡಿದ ಹಣವನ್ನು ಪಡೆಯಲು ಅಂಗಲಾಚುತ್ತಿದ್ದಾರೆ. ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತಂದು ಪ್ರತೀ ಭಾರತೀಯನ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ಹೇಳಿದ ಮೋದಿ ಅವರು ಈಗ ದೇಶದ ಸಾಮಾನ್ಯರ ಮೇಲೆ ಹೊಡೆತ ನೀಡಿದ್ದಾರೆ. ಕಪ್ಪುಹಣದ ಮೇಲೆ ಸರ್ಜಿಕಲ್ ದಾಳಿ ಎನ್ನುತ್ತಿದ್ದಾರೆ. ಸರ್ಜಿಕಲ್ ದಾಳಿ ಆದ ಮೇಲೂ ಗಡಿಯಲ್ಲಿ ಸಾವು ನೋವು ನಿಂತಿಲ್ಲ. ಅದೇ ರೀತಿ ಕಪ್ಪು ಹಣದ ವಿರುದ್ಧ ಸರ್ಜಿಕಲ್ ದಾಳಿ ಎನ್ನುತ್ತಾ, ದುಡಿದು ತಿನ್ನುವ ಕೋಟ್ಯಂತರ ಜನರನ್ನು ನರಕಕ್ಕೆ ತಳ್ಳಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಅಮಲ ರಾಮಚಂದ್ರ ಮಾತನಾಡಿ, ಅಂಬಾನಿ ಅದಾನಿಯಂಥ ದೊಡ್ಡ ದೊಡ್ಡ ಕುಳಗಳಿಗೆ ಮೊದಲೇ ಹೇಳಿ ಮೋದಿ ಅವರು ನೋಟು ನೋಟು ನಿಷೇಧ ಮಾಡಿದ್ದಾರೆ ಎಂಬುದು ಬಿಜೆಪಿ ನಾಯಕ ಯತಿನ್ ಓಜಾ ಮಾತಿನಿಂದ ಸ್ಪಷ್ಟವಾಗಿದೆ. ಕೋಟಾ ನೋಟಿನ ವಿರುದ್ಧ ಇದೊಂದು ಕೋಟಾ ದಾಳಿಯಾಗಿದೆ. ಜನ ದುಡ್ಡಿಲ್ಲದೆ ಸಾಯುತ್ತಿದ್ದಾರೆ. ಮದುವೆ ಕಾರ್ಯಗಳು ನಿಂತು ಹೋಗಿವೆ. ಅಡಕೆ ಧಾರಣೆ ಕುಸಿದಿದೆ ಎಂದು ಆರೋಪಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಧಾರ್ಮಿಕ ನೇತಾರ ಹುಸೇನ್ ದಾರಿಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ, ಕಾರ್ಮಿಕರ ಘಟಕದ ಪ್ರಧಾನ ಕಾರ್ಯದರ್ಶಿ ನಝೀರ್ ಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಯುವಕ ಕಾಂಗ್ರೆಸ್ ಅಧ್ಯಕ್ಷ ಮೊಯ್ದೀನ್ ಅರ್ಶದ್ ದರ್ಬೆ, ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್ ಮತ್ತಿತರರು ಮಾತನಾಡಿದರು.

ಪಕ್ಷದ ಮುಖಂಡರಾದ ಕೃಷ್ಣ ಪ್ರಸಾದ್ ಆಳ್ವ, ವಿಲ್ಮಾ ಗೋನ್ಸಾಲ್ವಿಸ್, ಜೋಕಿಂ ಡಿಸೋಜ, ಮಹೇಶ್ ರೈ ಅಂಕೊತ್ತಿಮಾರ್, ವಕೀಲ ನೂರುದ್ದೀನ್ ಸಾಲ್ಮರ, ಇಸಾಕ್ ಸಾಲ್ಮರ, ಬಿ.ಎ. ರಹಿಮಾನ್, ಯಾಕೂಬ್ ದರ್ಬೆ, ಗಣೇಶ್ ರಾವ್ ಮುತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News