ಬ್ರೆಝಿಲ್ ಫುಟ್ಬಾಲ್ ಆಟಗಾರರನ್ನು ಕರೆದೊಯ್ಯುತ್ತಿದ್ದ ವಿಮಾನ ಪತನ; 25 ಪ್ರಯಾಣಿಕರ ಮೃತದೇಹ ಪತ್ತೆ
ಕೊಲಂಬಿಯಾ, ನ.29: ಬ್ರೆಝಿಲ್ ಫುಟ್ಬಾಲ್ ತಂಡ ಚಾಪಿಕೊಯೆನ್ಸ್ ಆಟಗಾರರು ಸೇರಿದಂತೆ 81 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಕೊಲಂಬಿಯಾದ ಲಾ ಯೂನಿಯನ್ ಎಂಬಲ್ಲಿ ಪತನಗೊಂಡಿದ್ದು, ಈ ದುರಂತದಲ್ಲಿ ಮೃತಪಟ್ಟಿರುವ ಪ್ರಯಾಣಿಕರ ಪೈಕಿ 25ಮಂದಿಯ ಮೃತದೇಹ ದೊರೆತಿದೆ.
ಲಾಮಿಯಾ ವಿಮಾನ ಸಂಸ್ಥೆಗೆ ಸೇರಿರುವ ಆರ್ ಜೆ 85, ಸಿಪಿ-2933 ವಿಮಾನ ದುರಂತದಲ್ಲಿ ಆರು ಮಂದಿ ಬದುಕುಳಿದಿದ್ದಾರೆ. ಇವರಲ್ಲಿ ಚಾಪಿಕೊಯೆನ್ಸ್ ತಂಡದ ಆಲನ್ ರುಸ್ಚೆಲ್ ಸೇರಿದ್ದಾರೆಂದು ತಿಳಿದು ಬಂದಿದೆ.
ಮೆಡೆಲಿನ್‍ನಲ್ಲಿ ಬುಧವಾರ ನಿಗದಿಯಾಗಿದ್ದ ಕೊಪ ಸುಡಾಮೆರಿಕಾ ಫೈನಲ್ ಪಂದ್ಯದಲ್ಲಿ ಅಟ್ಲಾಂಟಿಕೊ ನಾಸಿಯೋನಲ್ ವಿರುದ್ಧ ಆಡುವುದಕ್ಕಾಗಿ ಚಾಪಿಕೊಯೆನ್ಸ್ ತಂಡ ಮೆಡೆಲಿನ್‍ಗೆ ಪ್ರಯಾಣ ಬೆಳೆಸಿತ್ತು.
ವಿಮಾನದಲ್ಲಿದ್ದ 72 ಮಂದಿ ಪ್ರಯಾಣಿಕರು 9 ಮಂದಿ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರುಎಂದು ಕೊಲಂಬಿಯಾದ ವಿಮಾನ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಹೆಲಿಕಾಪ್ಟರ್, ರೆಡ್ ಕ್ರಾಸ್, ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ದಳದ ಕಾರ್ಯಕರ್ತರು ಶೋಧ ಕಾರ್ಯ ಮುಂದುವರಿಸಿದ್ದಾರೆ.