×
Ad

ಮನಪಾ: ಡಿಸೆಂಬರ್ ಅಂತ್ಯದೊಳಗೆ ನಗರದ ಎಲ್ಲಾ ರಸ್ತೆಗಳ ಪ್ಯಾಚ್‌ವರ್ಕ್

Update: 2016-11-29 15:52 IST

ಮಂಗಳೂರು, ನ.29: ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಒಳ ರಸ್ತೆಗಳ ಗುಂಡಿ ಮುಚ್ಚುವುದು, ತೇಪೆ ಹಾಕುವ ಕಾರ್ಯ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವುದು ಹಾಗೂ ನಾದುರಸ್ತಿಯಲ್ಲಿರುವ ನಗರದ ಪ್ರಮುಖ ರಸ್ತೆಗಳ ಡಾಮರೀಕರಣ ಕಾಮಗಾರಿ ಫೆಬ್ರವರಿಯಿಂದ ಕೈಗೆತ್ತಿಕೊಳ್ಳಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. 

ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲೋಟ್ ಪಿಂಟೊ ಈ ವಿಷಯ ತಿಳಿಸಿದರು. ನಗರದಲ್ಲಿ ರಸ್ತೆಗಳು ಹದಗೆಟ್ಟು ವಾಹನ ಸಂಚಾರ ಹಾಗೂ ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗುತ್ತಿರುವ ಕುರಿತಂತೆ ಸಭೆಯಲ್ಲಿ ಸದಸ್ಯರು ಗಮನ ಸೆಳೆದ ಕುರಿತಂತೆ ಅವರು ಈ ವಿಷಯ ತಿಳಿಸಿದರು. ಒಳರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಪಡೀಲ್, ಜೈಲು ರೋಡ್‌ಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಒಳ ರಸ್ತೆಗಳ ಪ್ಯಾಚ್‌ವರ್ಕ್ ಕಾರ್ಯ ಮುಗಿಸಲಾಗುವುದು. ನಗರದ ಹಾಳಾಗಿರುವ ಪ್ರಮುಖ ರಸ್ತೆಗಳ ಅಂದಾಜುಪಟ್ಟಿಯನ್ನು ಜನವರಿಯೊಳಗೆ ನೀಡುವಂತೆ ತಿಳಿಸಲಾಗಿದೆ. ಬಳಿಕ ಆ ರಸ್ತೆಗಳಿಗೆ ಡಾಮರೀಕರಣ ಮಾಡುವ ಕಾರ್ಯ ಆರಂಭಗೊಳ್ಳಲಿದೆ ಎಂದು ಲ್ಯಾನ್ಸಿ ಲೋಟ್ ಪಿಂಟೋ ಹೇಳಿದರು.

ಕಾವೂರು ರಸ್ತೆಯಲ್ಲಿ ಹೊಸ ನೀರಿನ ಪೈಪ್‌ಲೈನ್‌ಗೆ ಆದೇಶ
 
ಕಾವೂರು- ಕುಂಜತ್ತಬೈಲ್ ರಸ್ತೆಯಲ್ಲಿ ನೀರಿನ ಪೈಪ್‌ಲೈನ್ ಆಗಾಗ ಒಡೆಯುತ್ತಿರುವುದರಿಂದ ಕಾವೂರು ಪ್ರದೇಶದ ಜನರಿಗೆ ನೀರಿನ ಸಮಸ್ಯೆಯಾಗುತ್ತಿರುವ ಬಗ್ಗೆ ಸದಸ್ಯರು ಸಭೆಯಲ್ಲಿ ಗಮನ ಸೆಳೆದಾಗ, ಮುಂದಿನ ಸಭೆಯೊಳಗೆ ಕಾವೂರು ರಸ್ತೆಯಲ್ಲಿ ಹೊಸ ಪೈಪ್‌ಲೈನ್ ಹಾಕಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.

ನಿವೇಶನ ರಹಿತರಿಗೆ ವಸತಿ: ಆಯ್ಕೆ ವೇಳೆ ಸದಸ್ಯರ ಅವಗಣನೆ ಆರೋಪ

ಮನಪಾ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ವಸತಿಗಾಗಿ ಆಯ್ಕೆ ನಡೆದಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಆಯ್ಕೆ ವೇಳೆ ಸ್ಥಳೀಯ ಮನಪಾ ಸದಸ್ಯರಿಂದ ಮಾಹಿತಿಯನ್ನು ಕೋರಲಾಗಿತ್ತು. ಆದರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಫಲಾನುಭವಿಗಳ ಆಯ್ಕೆ ವೇಳೆ ಸದಸ್ಯರನ್ನು ಅವಗಣನೆ ಮಾಡಲಾಗಿದೆ ಎಂಬ ಆರೋಪ ವಿಪಕ್ಷ ಸದಸ್ಯರಿಂದ ವ್ಯಕ್ತವಾಯಿತು. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1100 ವಸತಿ ನಿರ್ಮಾಣವು ಜಿ+3 ಮಾದರಿಯ ಬಹುಮಹಡಿ ಕಟ್ಟಡದ ರೀತಿಯಲ್ಲಿ ನಡೆಯಲಿದೆ. ಕಟ್ಟಡಕ್ಕಾಗಿ 55 ಕೋಟಿ ರೂ. ಹಾಗೂ ಮೂಲಸೌಕರ್ಯಕ್ಕಾಗಿ 15 ಕೋಟಿ ರೂ. ಸೇರಿದಂತೆ ಒಟ್ಟು 70 ಕೋಟಿ ರೂ.ಗಳ ಡಿಪಿಆರ್ ತಯಾರಿಸಲಾಗಿದೆ ಎಂದು ಆಯುಕ್ತರು ಸಭೆಯಲ್ಲಿ ತಿಳಿಸಿದರು.

 
ತಲಾ 5 ಲಕ್ಷ ರೂ. ಘಟಕ ವೆಚ್ಚದಲ್ಲಿ ಈ ಮನೆಗಳು ನಿರ್ಮಾಣಗೊಳ್ಳಲಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡವರಿಗೆ ಮಹಾನಗರ ಪಾಲಿಕೆಯಿಂದ ಸಹಾಯಧನ ತಲಾ 1 ಲಕ್ಷ ರೂ., ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ(ಆರ್‌ಜಿಎಚ್‌ಎಚ್‌ಸಿಎಲ್)ದಿಂದ 1.80 ಲಕ್ಷ ರೂ. ಸಹಾಯಧನ, ಕೇಂದ್ರ ಪುರಸ್ಕೃತ ಪಿಎಂಎವೈ ಯೋಜನೆಯಡಿ 1.50 ಲಕ್ಷ ರೂ., ಫಲಾನುಭವಿಯ ಕೊಡುಗೆ 20,000 ರೂ. ಹಾಗೂ 50,000 ರೂ. ಸಾಲದಲ್ಲಿ ಮನೆ ನಿರ್ಮಾಣವಾಗಲಿದೆ. ಸಾಮಾನ್ಯ ವರ್ಗದವರಿಗೆ ಆರ್‌ಜಿಎಚ್‌ಎಚ್‌ಸಿಎಲ್‌ನ 1.20 ಲಕ್ಷ ರೂ., ಪಿಎಂಎವೈನಿಂದ 1.50 ಲಕ್ಷರೂ., ಫಲಾನುಭವಿಯ ಕೊಡುಗೆ 30,000 ರೂ., ಮನಪಾದಿಂದ 70,000 ರೂ. ಹಾಗೂ ಉಳಿದ 1.30 ಲಕ್ಷ ರೂ. ಸಾಲದ ರೂಪದಲ್ಲಿ ಮನೆ ನಿರ್ಮಾಣವಾಗಲಿದೆ. ಯೋಜನೆಗಾಗಿ ಮಹಾನಗರ ಪಾಲಿಕೆಯ ದಕ್ಷಿಣ ಕ್ಷೇತ್ರದಿಂದ 3135 ಅರ್ಜಿಗಳು ಬಂದಿದ್ದು, 1100 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಉತ್ತರದಲ್ಲಿ 2400 ಅರ್ಜಿಗಳಲ್ಲಿ 900 ಫಲಾನುಭವಿಗಳು ಸೇರಿದಂತೆ ಒಟ್ಟು 2000 ಮಂದಿಗೆ ಈ ಯೋಜನೆಯಡಿ ವಸತಿ ಲಭ್ಯವಾಗಲಿದೆ ಎಂದು ಆಯುಕ್ತರು ವಿವರ ನೀಡಿದರು.

ಸಭೆಯಲ್ಲಿ ಉಪ ಮೇಯರ್ ಸುಮಿತ್ರಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News