×
Ad

ವಾಹನಗಳ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಗೆ ವಂಚನೆ : ಲಾರಿ ಸಹಿತ ಐವರು ಆರೋಪಿಗಳ ಸೆರೆ

Update: 2016-11-29 17:47 IST

ಮಂಗಳೂರು, ನ.29: ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ವಂಚಿಸುತ್ತಿದ್ದ ಜಾಲವೊಂದನ್ನು ಪತ್ತೆಹಚ್ಚಿದ ಬರ್ಕೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕುಲಶೇಖರ ಕೋಟಿಮುರದ ಅನಿಲ್ ಕಿರಣ್ ನರೋನ್ಹಾ, ಮರೋಳಿ ಅಳಪೆಯ ಸುಧೀರ್, ಉಳಾಯಿಬೆಟ್ಟು ಮಂಜಗುಡ್ಡೆಯ ನವೀನ್ ನರೋನ್ಹಾ ಯಾನೆ ಮೆಲ್ವಿನ್ ನರೋನ್ಹಾ, ಪಾವೂರು ಮಜಕಟ್ಟೆಯ ವಲ್ಲಿ ಯಾನೆ ವಲೇರಿಯನ್ ಡಿಸೋಜ ಮತ್ತು ಬಂಟ್ವಾಳ ವಗ್ಗದ ಜಬ್ಬಾರ್ ಬಂಧಿತರು.

ಆರೋಪಿಗಳು ಲಾರಿ ಚಾಸಿಸ್ ಮತ್ತು ಇಂಜಿನ್ ನಂಬರ್‌ಗಳನ್ನು ಬದಲಾಯಿಸಿ ಮೂರು ಲಾರಿಗಳಿಗೆ 7 ಕಡೆ ವಿವಿಧ ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದುಕೊಂಡು ಸುಮಾರು 93,94,020 ಲಕ್ಷ ರೂ. ಸಾಲ ಪಡೆದು ವಂಚನೆ ನಡೆಸಿರುವುದು ಪತ್ತೆಯಾಗಿದೆ. ನಾಲ್ಕು ಲಾರಿಗಳ ಒಟ್ಟು ವೌಲ್ಯ 80 ಲಕ್ಷ ರೂ.ಗಳಾಗಿವೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ. ಮತ್ತಷ್ಟು ವಾಹನಗಳು, ಆರೋಪಿಗಳ ಸಹಿತ ಬೃಹತ್ ಜಾಲ ಇರುವ ಶಂಕೆ ಇದೆ ಎಂದು ಪೊಲೀಸ್ ಆಯುಕ್ತ ತಿಳಿಸಿದರು.

ನಗರದ ವೇರ್‌ಹೌಸ್ ಜಂಕ್ಷನ್ ಬಳಿ ಬೆಳಗಿನ ಜಾವಾ ಬರ್ಕೆ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್ಸೈ ನರೇಂದ್ರ ಮತ್ತು ಎಎಸ್ಸೈ ಪ್ರಕಾಶ್ ಹಾಗೂ ಸಿಬಂದಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಆಗಮಿಸಿದ ಕೆಎ 19ಎಬಿ-6078 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದು ವಿಚಾರಿಸಿದಾಗ ಅಸ್ಪಷ್ಟ ಮಾಹಿತಿ ನೀಡಿದರು. ಲಾರಿಯ ದಾಖಲೆ ಮತ್ತಿತರ ವಿವರ ಕೇಳಿದಾಗ ಲಾರಿಯಲ್ಲಿದ್ದ ಕಿರಣ್ ನೊರೋನ್ಹಾ, ಸುಧೀರ್ ಮತ್ತು ಜಬ್ಬಾರ್ ಅಸಮರ್ಪಕವಾಗಿ ಉತ್ತರಿಸಿದರು. ಶಂಕೆಯಿಂದ ಪೊಲೀಸರು ಲಾರಿಯ ಕ್ಯಾಬಿನ್‌ನನ್ನು ಶೋಧಿಸಿದಾಗ ಹಸಿರು ಬಣ್ಣದ ಸ್ಕೂಲ್ ಬ್ಯಾಗ್‌ನೊಳಗೆ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಲಾರಿಯ ಟ್ಯಾಂಪರಿಂಗ್ ಮಾಡುವ ಇಂಗ್ಲೀಷ್ ವರ್ಣಮಾಲೆಯ ಮತ್ತು 0-9ರವರೆಗಿನ ಸಂಖ್ಯೆಗಳಿರುವ ಪಂಚ್‌ಗಳು ಪತ್ತೆಯಾಯಿತು. ಆರೋಪಿಗಳನ್ನು ಕೂಲಂಕಷವಾಗಿ ವಿಚಾರಿಸಿದಾಗ ಆರೋಪಿಗಳು ನಗರದ ವಿವಿಧೆಡೆ ಬಚ್ಚಿಟ್ಟಿದ್ದ 4 ಲಾರಿಗಳನ್ನು ವಶಕ್ಕೆ ಪಡೆಯಲಾಯಿತು. ಅಂತೆಯೇ ಕೊಣಾಜೆ ಸಮೀಪದ ಪಜೀರು ಬಳಿ ವಲೇರಿಯನ್ ಡಿಸೋಜನನ್ನು ಬಂಧಿಸಲಾಯಿತು. ಉಳಾಯಿಬೆಟ್ಟುವಿನ ನವೀನ್ ಯಾನೆ ಮೆಲ್ವಿನ್ ನೊರೊನ್ಹಾ ಎಂಬಾತನ ಜತೆ ಸೇರಿಕೊಂಡು ಬಂಟ್ವಾಳ ವಗ್ಗ ಸಮೀಪ ಕಾವಳಕಟ್ಟೆಯ ನಿವಾಸಿ ಅಬ್ದುಲ್ ಜಬ್ಬಾರ್ ಎಂಬಾತನ ಮೂಲಕ ಲಾರಿಗಳ ನಕಲಿ ಇಂಜಿನ್ ಮತ್ತು ಚಾಸಿಸ್ ನಂಬ್ರಗಳನ್ನು ತಯಾರು ಮಾಡುವ ಸಾಧನಗಳನು ಬಳಸಿ ಲಾರಿಗಳ ಚಾಸಿಸ್ ಮತ್ತು ಇಂಜಿನ್ ನಂಬರ್‌ಗಳನ್ನು ಟ್ಯಾಂಪರ್ ಮಾಡಿ ಸಾರಿಗೆ ಕಚೇರಿಯಿಂದ ನಕಲಿ ದಾಖಲೆಗಳನ್ನು ಸಷ್ಟಿಸಿ ಮಂಗಳೂರಿನ ವಿವಿಧ ಬ್ಯಾಂಕ್‌ಗಳು ಮತ್ತು ಸೊಸೈಟಿಗಳಿಂದ ಲಾರಿಗಳ ನಕಲಿ ದಾಖಲೆಗಳನ್ನು ನೀಡಿ ಸಾಲವನ್ನು ಪಡೆದುಕೊಂಡು ಬ್ಯಾಂಕ್ ಮತ್ತು ಸೊಸೈಟಿಗಳಿಗೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

 ಆರೋಪಿಗಳು ಕೆನರಾ ಬ್ಯಾಂಕ್, ಸಿಂಡಿಕೇಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಲಿ. ನಲ್ಲಿ ಸಾಲ ಪಡೆದು ವಂಚಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ 3 ಮಂದಿಯ ಬಂಧನವಾಗಲು ಬಾಕಿ ಇದೆ. ಅಲ್ಲದೆ ಬ್ಯಾಂಕ್‌ಗಳು ಸಾಲ ನೀಡುವ ವೇಳೆ ಕೈಗೊಂಡಿರುವ ಕ್ರಮಗಳು, ಆರ್‌ಟಿಒ ಇಲಾಖೆಯಲ್ಲಿ ನೀಡಿದ ದಾಖಲೆ ಸಹಿತ ಜಾಲದ ಹಿಂದಿರುವ ವ್ಯಕ್ತಿಗಳ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಯಲಿದೆ ಎಂದು ಪೊಲೀಸ್ ಕಮಿಷನರ್ ಚಂದ್ರಶೇಖರ್ ವಿವರಿಸಿದರು.

  ಕಾರ್ಯಾಚರಣೆಯಲ್ಲಿ ಉಪ ಆಯುಕ್ತರಾದ ಶಾಂತರಾಜ್, ಸಂಜೀವ ಪಾಟೀಲ, ಸಹಾಯಕ ಪೊಲೀಸ್ ಆಯುಕ್ತ ಉದಯ್ ನಾಯಕ್, ಬಕೆರ್  ಠಾಣಾ ನಿರೀಕ್ಷಕ ರಾಜೇಶ್, ಅಪರಾಧ ವಿಭಾಗದ ಎಸ್ಸೈ ನರೇಂದ್ರ, ಕಾನೂನು ಸುವ್ಯವಸ್ಥೆ ವಿಭಾಗದ ಎಸ್ಸೈ ಪ್ರಕಾಶ್ ಕುಮಾರ, ಎಎಸ್ಸೈ ಪ್ರಕಾಶ್, ಲೋಕೇಶ್ವರ್ ಮತ್ತು ಸಿಬ್ಬಂದಿ ಚಂದ್ರಶೇಖರ್, ಗಣೇಶ್, ನಾಗರಾಜ್, ಮಹೇಶ್, ಪ್ರಶಾಂತ್, ವಿಜಯಾ ಮತ್ತು ಧನವಂತಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News