ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯಬೇಕು : ಪಿ.ಬಿ.ಅಬ್ದುಲ್ ರಝಾಕ್

Update: 2016-11-29 12:48 GMT

 ಮಂಜೇಶ್ವರ,ನ.29 : ಪ್ರತಿಭೆಗಳಿಗೆ ಅನಾವರಣ ಮತ್ತು ಸಾಧನಾಶೀಲರಿಗೆ ಪ್ರೋತ್ಸಾಹ ದೊರೆಯಬೇಕು. ಈ ನಿಟ್ಟಿನಲ್ಲಿ ರಕ್ಷಕರ ಪಾತ್ರ ಮಹತ್ವವಾದುದು. ಕಲೋತ್ಸವ ಸ್ಪರ್ಧೆಗಳು ಇದಕ್ಕೆ ಪೂರಕ ಎಂದು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅಭಿಪ್ರಾಯಪಟ್ಟರು.

   ಅವರು ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಹಯರ್ ಸೆಕೆಂಡರಿ ಶಾಲೆ ಹಾಗೂ ಎ.ಯು.ಪಿ. ಶಾಲೆಯಲ್ಲಿ ಮಂಗಳವಾರದಿಂದ ಆರಂಭಗೊಂಡ  ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

   ಏಷ್ಯಾದಲ್ಲಿ ಅತ್ಯಪೂರ್ವವೆನಿಸಿರುವ ಕೇರಳ ಶಾಲಾ ಕಲೋತ್ಸವ ಸುಪ್ತ ಪ್ರತಿಭೆಗಳ ಅನಾವರಣದ ಮೂಲಕ ಹೊಸ ಮುಖಗಳನ್ನು ಕಲಾ ಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದು,ಗ್ರಾಮೀಣ ಮಟ್ಟದ ಕ್ರೀಯಾಶಿಲತೆಗಳಿಗೆ ರಹದಾರಿಯೊದಗಿಸುತ್ತವೆಯೆಂದು ಅವರು ತಿಳಿಸಿದರು.

   ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅರುಣಾ ಜೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ನಂದಿಕೇಶನ್ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು.

  ಮಂಗಳೂರು ಆಕಾಶವಾಣಿಯ ನಿಲಯ ನಿರ್ದೇಶಕರಾದ ಡಾ.ವಸಂತ ಕುಮಾರ್ ಪೆರ್ಲ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ವಿದ್ಯೆ ಅಂದರೆ ಅದು ಸರ್ವಾಂಗೀಣ ಅಭಿವೃದ್ಧಿ.ಪಠ್ಯೇತರ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿ ಎಂದರು.ಇಂದಿನ ಬಿಗುವಾದ ಕಲಿಕಾ ಒತ್ತಡಗಳ ಮಧ್ಯೆ ಮಕ್ಕಳ ಪ್ರತಿಭೆಗಳನ್ನು ಬೆಳೆಸುವಲ್ಲಿ ಹೆತ್ತವರು,ಶಿಕ್ಷಕರು ಹೆಣಗಾಡಬೇಕಾಗಿದ್ದರೂ ಪ್ರೋತ್ಸಾಹ ನಿಲ್ಲದಿರಲಿ ಎಂದು ತಿಳಿಸಿದರು.ನಾಲ್ಕು ಗೋಡೆಗಳ ನಡುವಿನಿಂದಾಚೆಗೂ ಕಲಿಕೆ,ಸಾಂಸ್ಕೃತಿಕ,ಸಾಮಾಜಿಕ ಬದುಕಿದೆಯೆಂಬುದನ್ನು ಮುಂದಿನ ತಲೆಮಾರಿಗೆ ತಿಳಿಸಬೇಕಾದ ಅನಿವಾರ್ಯತೆಗೆ ಜಗತ್ತು ಸಾಗುತ್ತಿರುವುದರ ಅರಿವು ನಮ್ಮಲ್ಲಿರಲೆಂದು ಅವರು ತಿಳಿಸಿದರು.

  ಪುತ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ.ಬಿ.ಮೊಹಮ್ಮದ್, ಪುತ್ತಿಗೆ ಗ್ರಾಮ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಿ ವೈ, ಪುತ್ತಿಗೆ ಗ್ರಾಮ ಪಂಚಾಯತ್ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷ ಚನಿಯ ಪಾಡಿ, ಕ್ಯಾಂಪ್ಕೋ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಹಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕ ಎನ್.ಶಂಕರನಾರಾಯಣ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಂದರ ಶೆಟ್ಟಿ ಬಿ.ಜಿ. ಶುಭ ಹಾರೈಸಿದರು.

   ಕಲೋತ್ಸವದ ಪ್ರಧಾನ ಸಂಚಾಲಕ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್ ಸ್ವಾಗತಿಸಿ, ಧರ್ಮತಡ್ಕ ಎ.ಯು.ಪಿ. ಶಾಲಾ ಮುಖ್ಯೋಪಾಧ್ಯಾಯ ಎನ್.ಮಹಾಲಿಂಗ ಭಟ್ ವಂದಿಸಿದರು. ಶಿಕ್ಷಕಿ ಉಮಾದೇವಿ ಹಾಗೂ ಗೋವಿಂದ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಬುಧವಾರ ಹಾಗೂ ಗುರುವಾರದಂದು ವಿವಿಧ ವೇದಿಕೆಗಳಲ್ಲಾಗಿ ವಿವಿಧ ಸ್ಪರ್ಧೆಗಳು ನಡೆದು ಗುರುವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News