ಪುತ್ತೂರು ಜೆಡಿಎಸ್ ಅಧ್ಯಕ್ಷರ, ಕಾರ್ಯಾಧ್ಯಕ್ಷರ ನೇಮಕಾತಿಗೆ ತಡೆ
ಪುತ್ತೂರು,ನ.29: ಪುತ್ತೂರು ವಿಧಾನ ಸಭಾ ಕ್ಷೇತ್ರದ ನೂತನ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ನೇಮಕಾತಿಯನ್ನು ತಡೆಹಿಡಿಯುವಂತೆ ಹಾಗೂ ನ.30 ಪುತ್ತೂರಿನಲ್ಲಿ ಆಯೋಜಿಸಲಾಗಿರುವ ನೂತನ ಕ್ಷೇತ್ರ ಸಮಿತಿ ಕಚೇರಿಯ ಉದ್ಘಾಟನಾ ಕಾರ್ಯಕ್ರಮವನ್ನು ಮುಂದುವರಿಸಬೇಕು ಎಂದು ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ಅವರಿಗೆ ರಾಜ್ಯ ಕಾರ್ಯಾಧ್ಯಕ್ಷ ಎಂ.ಎಸ್. ನಾರಾಯಣ ರಾವ್ ಅವರು ಪತ್ರ ಬರೆದು ಸೂಚನೆ ನೀಡಿದ್ದಾರೆ. ಇದರಿಂದಾಗಿ ಪುತ್ತೂರು ಜೆಡಿಎಸ್‌ನಲ್ಲಿ ಗೊಂದಲ ಮುಂದುವರಿದಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕ್ಷೇತ್ರ ಸಮಿತಿಯ ಚುನಾವಣೆ ಕ್ರಮಬದ್ದವಾಗಿ ನಡೆದಿಲ್ಲ ಎಂಬ ದೂರಿನ ಹಿನ್ನಲೆಯಲ್ಲಿ ಈ ಸೂಚನೆಯನ್ನು ನೀಡಿರುವ ರಾಜ್ಯ ಕಾರ್ಯಾಧ್ಯಕ್ಷರು ಅಧ್ಯಕ್ಷರ ಮತ್ತು ಸಮಿತಿಯ ಆಯ್ಕೆಯನ್ನು ಆ ಕ್ಷೇತ್ರದ ಅಧ್ಯಕ್ಷರು ಕಳುಹಿಸಿರುವ ಪಟ್ಟಿಯಂತೆ ಮಾಡಲು ಬರುವುದಿಲ್ಲ. ನೂತನ ಅಧ್ಯಕ್ಷರಾಗಿ ಐ.ಸಿ. ಕೈಲಾಸ್ ಮತ್ತು ಕಾರ್ಯಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಅವರ ಆಯ್ಕೆಯನ್ನು ರಾಷ್ಟ್ರಾಧ್ಯಕ್ಷರಾದ ಹೆಚ್.ಡಿ. ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಆದೇಶದಂತೆ ಜಿಲ್ಲಾಧ್ಯಕ್ಷರು ನೇಮಕ ಮಾಡಿರುವುದಾಗಿ ತಿಳಿಸಲಾಗಿದೆ. ಈ ಆದೇಶ ನೀಡಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಇದರಿಂದಾಗಿ ಗೊಂದಲವಾಗಿದ್ದು, ಜಿಲ್ಲಾಧ್ಯಕ್ಷರು ತಮ್ಮಲ್ಲಿರುವ ದಾಖಲೆಗಳನ್ನು ರಾಜ್ಯ ಸಮಿತಿಗೆ ನೀಡಲು ಆದೇಶ ನೀಡಿರುವ ರಾಜ್ಯ ಕಾರ್ಯಾಧ್ಯಕ್ಷರು ಈ ಬಗ್ಗೆ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗಿದೆ. ಅಲ್ಲಿತ ತನಕ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ನೇಮಕಾತಿಯನ್ನು ತಡೆ ಹಿಡಿಯುಂತೆ ಹಾಗೂ ನೂತನ ಕಚೇರಿ ಉದ್ಘಾಟನೆಯನ್ನು ಮುಂದೂಡುವಂತೆ ಪತ್ರದಲ್ಲಿ ಸೂಚಿಸಿದ್ದಾರೆ. ಇದರಿಂದಾಗಿ ಪುತ್ತೂರು ಜೆಡಿಎಸ್‌ನಲ್ಲಿ ಗೊಂದಲ ಮುಂದುವರಿದಿದೆ. ಆಯ್ಕೆಯಲ್ಲಿ ಗೊಂದಲವಾಗಿಲ್ಲ: ಕಾನೂನುಬದ್ದವಾಗಿ ನಡೆದಿದೆ-ಐ.ಸಿ.ಕೈಲಾಸ್
ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷರ ಮತ್ತು ಕಾರ್ಯಾಧ್ಯಕ್ಷರ ಆಯ್ಕೆಯಲ್ಲಿ ಯಾವುದೇ ಗೊಂದಲವಾಗಿಲ್ಲ. ಎಲ್ಲವೂ ಪಕ್ಷದ ಸೂಚನೆಯಂತೆ ಚುಣಾವಣೆ ಪ್ರಕ್ರಿಯೆ ನಡೆದು ಕಾನೂನುಬದ್ದವಾಗಿ ಆಯ್ಕೆ ನಡೆದಿದೆ. ಆದರೆ ಹಿಂದಿನ ಅಧ್ಯಕ್ಷರಾಗಿದ್ದ ಇಬ್ರಾಹಿಂ ಗೋಳಿಕಟ್ಟೆ ಅವರು ರಾಜ್ಯ ಕಾರ್ಯಾಧ್ಯಕ್ಷರಾದ ಎಂ.ಎಸ್. ನಾರಾಯಣ ರಾವ್ ಅವರಿಗೆ ತಪ್ಪು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಏಕಾಏಕಿ ಈ ಆದೇಶವನ್ನು ಪಕ್ಷದ ಜಿಲ್ಲಾಧ್ಯಕ್ಷರಿಗೆ ನೀಡಿದ್ದಾರೆ. ಆವರಿಂದ ತಪ್ಪಾಗಿದೆ. ಅವರು ಈ ಬಗ್ಗೆ ಜಿಲ್ಲಾಧ್ಯಕ್ಷರೊಂದಿಗೆ ಮಾತುಕತೆ ಮಾಡಿ ಮಾಹಿತಿ ಪಡೆಯಬೇಕಿತ್ತು. ಇದೀಗ ಅವರಿಗೆ ಮನವರಿಕೆಯಾಗಿರುವ ಕಾರಣ ಪರಿಸ್ಥಿತಿ ತಿಳಿಯಾಗಿದೆ. ಇದೀಗ ಅಧ್ಯಕ್ಷರು ಕಚೇರಿ ಉದ್ಘಾಟನೆಗೆ ಮುಂದೂಡಲು ಹಾಗೂ ಅಧ್ಯಕ್ಷರು, ಕಾರ್ಯಾಧ್ಯಕ್ಷರ ಆಯ್ಕೆಯನ್ನು ತಡೆಯಲು ನೀಡಿರುವ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ ಎಂದು ಅಧ್ಯಕ್ಷ ಐ.ಸಿ. ಕೈಲಾಸ್ ಅವರು ಸ್ಪಷ್ಟನೆ ನೀಡಿದ್ದಾರೆ.
ಕಚೇರಿ ಉದ್ಘಾಟನೆ ನಡೆಯಲಿದೆ:
ನ.30 ರಂದು ನಡೆಯಲಿರುವ ಪಕ್ಷದ ನೂತನ ಕಚೇರಿಯ ಉದ್ಘಾಟನೆಯೂ ನಡೆಯಲಿದೆ ಎಂದಿರುವ ಕೈಲಾಸ್ ಅವರು ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ಅಮರನಾಥ ಶೆಟ್ಟಿ, ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ, ರಾಜ್ಯ ಮುಖಂಡೆ ಕನ್ಯಾಕುಮಾರಿ ಮತ್ತಿತರರು ಉದ್ಘಾಟನಾ ಸಮಾರಂಭದಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಪಕ್ಷದಲ್ಲಿ ಸಣ್ಣಪುಟ್ಟು ಬಿನ್ನಾಭಿಪ್ರಾಯ ಸಹಜ
ಮಾತುಕತೆಯಲ್ಲಿ ಇತ್ಯರ್ಥಪಡಿಸುತ್ತೇವೆ - ಮಹಮ್ಮದ್ ಕುಂಞಿ
ಪಕ್ಷದಲ್ಲಿ ಇಂತಹ ಸಣ್ಣ ಪುಟ್ಟು ಬಿನ್ನಾಭಿಪ್ರಾಯಗಳು ಸಹಜ. ಆದರೆ ಪಕ್ಷದೊಳಗೆ ಯಾವುದೇ ಗುಂಪುಗಾರಿಕೆಯಿಲ್ಲ. ಪುತ್ತೂರಿನಲ್ಲಿ ನಡೆಯಲಿರುವ ಕಚೇರಿ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಭೆಗೆ ಹಿಂದಿನ ಅಧ್ಯಕ್ಷರ ಹೆಸರನ್ನೂ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ ಅವರನ್ನು ಅಹ್ವಾನಿಸಿದ್ದೇವೆ. ಅಧ್ಯಕ್ಷರ ಆಯ್ಕೆ ವಿಚಾರದ ಬಗ್ಗೆ ನಮ್ಮ ವರಿಷ್ಠರಾಗಿರುವ ದೇವೇಗೌಡರೊಂದಿಗೆ ಮಾತುಕತೆ ನಡೆಸಿದ್ದೇನೆ. ಎಲ್ಲಾ ಬಿನ್ನಾಭಿಪ್ರಾಯಗಳನ್ನು ಮಾತುಕತೆ ನಡೆಸಿ ಮುಗಿಸಲಾಗುವುದು. ಎಲ್ಲರೂ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.