ಕಾಫಿ ಬೆಳೆಗಾರರ ಹಿತರಕ್ಷಣೆಗೆ ಸಂಸತ್ತಿನಲ್ಲಿ ಶೋಭಾ ಒತ್ತಾಯ
ಉಡುಪಿ, ನ.29: ಸಮಗ್ರ ಕಾಫಿ ಅಭಿವೃದ್ಧಿ ಯೋಜನೆಯಡಿ ಬಾಕಿ ಇರುವ ಮೊತ್ತದ ಶೀಘ್ರ ಬಿಡುಗಡೆ, ಬೆಳೆ ಹಾನಿಗೊಳಗಾದ ಕಾಫಿ ಬೆಳೆಗಾರರಿಗೆ ವಿಮಾ ಸೌಲಭ್ಯ ಒದಗಿಸುವಿಕೆ, ಸಬ್ಸಿಡಿ ನೀಡುವಿಕೆ ಮತ್ತು ಪ್ರಸ್ತಾವಿತ ಜಿಎಸ್‌ಟಿ ಕಾಯ್ದೆಯ ವಿನಾಯಿತಿ ಪಟ್ಟಿಯಲ್ಲಿ ಕಾಫಿಯನ್ನೂ ಸೇರಿಸುವುದು ಮೊದಲಾದ ಕ್ರಮಗಳನ್ನು ಶೀಘ್ರವಾಗಿ ಅನುಷ್ಟಾನಗೊಳಿಸಿ ಕಾಫಿ ಬೆಳೆಗಾರರ ಹಿತ ಕಾಪಾಡುವಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಂಸತ್ತಿನಲ್ಲಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ನಿಯಮ 377 ರಡಿ ವಿಷಯ ಪ್ರಸ್ತಾಪಿಸಿದ ಕರಂದ್ಲಾಜೆ, 12ನೇ ಪಂಚವಾರ್ಷಿಕ ಯೋಜನೆಯಡಿ 950 ಕೋಟಿ ರೂ.ಗಳ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆಯು 2014ರಲ್ಲಷ್ಟೇ ಕಾರ್ಯ ರೂಪಕ್ಕೆ ಬಂದಿದ್ದು 2017ರಲ್ಲಿ 12ನೇ ಪಂಚವಾರ್ಷಿಕ ಯೋಜನೆ ಮುಕ್ತಾಯಗೊಳ್ಳಲಿದೆ ಎಂದರು.
ಪ್ರಸ್ತುತ 950 ಕೋಟಿ ರೂ.ಗಳ ಪೈಕಿ ಬಹುಪಾಲು ಮೊತ್ತ ಬಿಡುಗಡೆಗೆ ಬಾಕಿ ಇದ್ದು ಅದನ್ನು ನಿಗದಿತ ಕಾಲಮಿತಿಯೊಳಗೆ ಸಂಪೂರ್ಣವಾಗಿ ಸದುಪಯೋಗಪಡಿಸಬೇಕು. ಕಳೆದ 9 ತಿಂಗಳಿಂದ ಬಿಡುಗಡೆಯಾಗದಿರುವ ಸಬ್ಸಿಡಿಯನ್ನು ಪುನಃ ದೊರೆಯುವಂತೆ ಮಾಡಬೇಕು. ಸರಕಾರ ಕಾಫಿ ಬೋರ್ಡ್‌ನ ಶೇ.30 ಅನುದಾನ ಕಡಿತದ ಯೋಜನೆಯನ್ನು ಕೈ ಬಿಡಬೇಕು. ಕಾಫಿ ಬೋರ್ಡ್ ಈಗಾಗಲೇ 26 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸಲ್ಲಿಸಿದೆ. ಅದರ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಕಾಫಿ ಬೋರ್ಡ್‌ಗೆ ಕಳೆದ ಬಾರಿಗಿಂತ ಶೇ.20ರಷ್ಟು ಹೆಚ್ಚು ಅನುದಾನ ನೀಡಬೇಕು. ಅಲ್ಲದೇ ಬಾಕಿ ಅರ್ಜಿಗಳ ವಿಲೇವಾರಿಗೆ ಶೀಘ್ರದಲ್ಲೇ 35 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.