ಕ್ಯೂಬಾ ಜೊತೆಗಿನ ರಾಜಿ ಒಪ್ಪಂದ ರದ್ದತಿ ದುಬಾರಿಯಾಗಬಹುದು : ಟ್ರಂಪ್‌ಗೆ ಶ್ವೇತಭವನ ಎಚ್ಚರಿಕೆ

Update: 2016-11-29 15:17 GMT

ವಾಶಿಂಗ್ಟನ್, ನ. 29: ಕ್ಯೂಬಾದೊಂದಿಗೆ ಅಮೆರಿಕ ಹೊಂದಿರುವ ರಾಜಿ ಒಪ್ಪಂದವನ್ನು ರದ್ದುಪಡಿಸುವುದರ ವಿರುದ್ಧ ಶ್ವೇತಭವನ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಎಚ್ಚರಿಸಿದೆ. ಐತಿಹಾಸಿಕ ಒಪ್ಪಂದವನ್ನು ಅಮಾನ್ಯಗೊಳಿಸಿದರೆ ರಾಜತಾಂತ್ರಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಬೆಲೆ ತೆರೆಬೇಕಾಗುತ್ತದೆ ಎಂದು ಅದು ಹೇಳಿದೆ.

ಕ್ಯೂಬಾದೊಂದಿಗಿನ ರಾಜಿ ನೀತಿಯನ್ನು ನಿರ್ಗಮನ ಅಧ್ಯಕ್ಷ ಬರಾಕ್ ಒಬಾರ ಮಹತ್ವದ ವಿದೇಶ ನೀತಿಗಳ ಪೈಕಿ ಒಂದು ಎಂಬುದಾಗಿ ಪರಿಗಣಿಸಲಾಗಿದೆ.

ಕ್ಯೂಬಾದೊಂದಿಗಿನ ರಾಜಿ ಒಪ್ಪಂದವನ್ನು ರದ್ದುಪಡಿಸುವ ಬೆದರಿಕೆಯನ್ನು ಟ್ರಂಪ್ ನಿನ್ನೆ ಟ್ವಿಟರ್ ಮೂಲಕ ಹೊರಗೆಡಹಿದ್ದರು.

‘‘ಕ್ಯೂಬಾದ ಜನತೆ, ಕ್ಯೂಬ/ಅಮೆರಿಕನ್ ಜನತೆ ಮತ್ತು ಅಮೆರಿಕವನ್ನು ಕ್ಯೂಬಾ ಚೆನ್ನಾಗಿ ನಡೆಸಿಕೊಳ್ಳದಿದ್ದರೆ, ನಾನು ಅದರೊಂದಿಗಿನ ರಾಜಿ ಒಪ್ಪಂದವನ್ನು ರದ್ದುಪಡಿಸುತ್ತೇನೆ’’ ಎಂದು ತನ್ನ ಟ್ವೀಟ್‌ನಲ್ಲಿ ಟ್ರಂಪ್ ಹೇಳಿದ್ದಾರೆ.

ಕ್ಯೂಬಾದ ಮಾಜಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಅವರ ಶ್ರದ್ಧಾಂಜಲಿ ಸಪ್ತಾಹ ಸೋಮವಾರ ಆರಂಭಗೊಳ್ಳುತ್ತಿರುವಂತೆಯೇ, ಟ್ರಂಪ್‌ರ ಬೆದರಿಕೆ ಹೊರಬಿದ್ದಿದೆ.

ಈ ಬೆದರಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಶ್ವೇತಭವನ, ಕ್ಯೂಬಾದೊಂದಿಗಿನ ರಾಜಿ ಒಪ್ಪಂದವನ್ನು ರದ್ದುಪಡಿಸಿದರೆ ಅದಕ್ಕೆ ಬೆಲೆಯನ್ನೂ ತೆರಬೇಕಾಗುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೋಶ್ ಅರ್ನೆಸ್ಟ್ ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ರಾಜಿ ಒಪ್ಪಂದದ ಬಳಿಕ, ಕ್ಯೂಬಾ ಮತ್ತು ಅಮೆರಿಕಗಳು ದಶಕಗಳ ಬಳಿಕ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸಿವೆ, ವಿಮಾನ ಹಾರಾಟವನ್ನು ಪುನಾರಂಭಿಸಿವೆ ಹಾಗೂ ಹಲವಾರು ದಿಗ್ಬಂಧನೆಗಳು ತೆರವುಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News