ಜಿಪಂ ಎದುರು ಶಿರಿಯಾರ ಗ್ರಾಪಂ ಅಧ್ಯಕ್ಷೆ ಜ್ಯೋತಿ ಧರಣಿ
ಉಡುಪಿ, ನ.29: ಶಿರಿಯಾರ ಗ್ರಾಪಂನ ಅಧ್ಯಕ್ಷ ಸ್ಥಾನದಿಂದ ದಲಿತ ಮಹಿಳೆಯಾದ ತನ್ನನ್ನು ಕೆಳಗಿಸುವ ಹುನ್ನಾರದಿಂದಲೇ ಶಿರಿಯಾರ ಗ್ರಾಪಂನ್ನು ಬರ್ಖಾಸ್ತು ಮಾಡಲು ಜಿಪಂ ನಿರ್ಣಯಕೈಗೊಳ್ಳಲು ಮುಂದಾಗಿರುವುದನ್ನು ಖಂಡಿಸಿ, ಈ ನಿರ್ಣಯವನ್ನು ವಾಪಾಸು ಪಡೆಯಬೇಕೆಂದು ಒತ್ತಾಯಿಸಿ ಶಿರಿಯಾರ ಗ್ರಾಪಂನ ಅಧ್ಯಕ್ಷೆ ಜ್ಯೋತಿ ಇಂದು ಮಣಿಪಾಲದಲ್ಲಿರುವ ಉಡುಪಿ ಜಿಪಂ ಎದುರು ಏಕಾಂಗಿಯಾಗಿ ಧರಣಿ ನಡೆಸಿದರು.
ಜಿಪಂ ಸಭಾಂಗಣದಲ್ಲಿ ಜಿಪಂನ 4ನೇ ಸಾಮಾನ್ಯ ಸಭೆಯಲ್ಲಿ ಶಿರಿಯಾರ ಗ್ರಾಪಂನ ಬರ್ಖಾಸ್ತು ಗೊಳಿಸುವ ಬಗ್ಗೆ ಚರ್ಚೆ ವಿಷಯಸೂಚಿಯಲ್ಲಿದ್ದ ಹಿನ್ನೆಲೆಯಲ್ಲಿ ಒಳಗೆ ಸದಸ್ಯರು ಚರ್ಚೆ ನಡೆಸಿದರೆ ಹೊರಗೆ ಜ್ಯೋತಿ ಕೆಲವು ಬೆಂಬಲಿಗರೊಂದಿಗೆ ಬೆಳಗಿನಿಂದ ಧರಣಿ ನಡೆಸಿದರು.
2015ರಲ್ಲಿ ಶಿರಿಯಾರ ಗ್ರಾಪಂನ ಅಧ್ಯಕ್ಷೆಯಾಗಿ ತಾನು ಆಯ್ಕೆಯಾಗಿದ್ದು, ಪ್ರಾಮಾಣಿಕ ಹಾಗೂ ಭ್ರಷ್ಟಾಚಾರ ರಹಿತವಾಗಿ ಕರ್ತವ್ಯ ನಿರ್ವಹಿಸುವ ಗುರಿಯೊಂದಿಗೆ ಅಧಿಕಾರ ವಹಿಸಿಕೊಂಡಿದ್ದೆ. 13 ಸದಸ್ಯರ ಶಿರಿಯಾರ ಗ್ರಾಪಂನಲ್ಲಿ ತಾನೂ ಸೇರಿದಂತೆ ಐವರು ಕಾಂಗ್ರೆಸ್, 6 ಮಂದಿ ಬಿಜೆಪಿ ಹಾಗೂ ಇಬ್ಬರು ಪಕ್ಷೇತರರು ಸದಸ್ಯರಾಗಿದ್ದಾರೆ. ದಲಿತ ಮೀಸಲಾತಿಯಂತೆ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ತಾನು ಅಧ್ಯಕ್ಷೆಯಾಗಿ ಆಯ್ಕೆಯಾಗಿ ರುವುದಾಗಿ ಅವರು ತಿಳಿಸಿದರು.
ಆದರೆ ತನ್ನ ಪ್ರಾಮಾಣಿಕತೆಯನ್ನು ಸಹಿಸದ ಹಾಗೂ ಒಬ್ಬ ದಲಿತ ಮಹಿಳೆ ಅಧ್ಯಕ್ಷೆಯಾಗಿರುವುದನ್ನು ಸಹಿಸದ ಕೆಲವು ಸದಸ್ಯರು ಗ್ರಾಪಂ ಸಾಮಾನ್ಯ ಸಭೆಗಳಿಗೆ ಸತತವಾಗಿ (7-8ಬಾರಿ) ಗೈರುಹಾಜರಾಗಿ ಕೋರಂ ಇಲ್ಲದೇ ಗ್ರಾಮಸಭೆ ನಡೆಯದಂತೆ ನೋಡಿಕೊಂಡರು. ಈ ಮೂಲಕ ಗ್ರಾಪಂನ ಅಭಿವೃದ್ಧಿಗೆ ತೊಡರುಗಾಲಾದರು. ಸದಸ್ಯರು ತನಗೆ ಜಾತಿನಿಂದನೆ ಮಾಡಿದರು ಎಂದವರು ಪತ್ರಕರ್ತರೊಂದಿಗೆ ನೋವನ್ನು ತೋಡಿಕೊಂಡರು.
ಶಿರಿಯಾರ ಗ್ರಾಪಂನ ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಗಣಪ ಮೊಗವೀರ ಅವರು ಸದಸ್ಯರೊಂದಿಗೆ ಶಾಮೀಲಾಗಿ ತನಗೆ ತೊಂದರೆ ನೀಡಿದ್ದಲ್ಲದೇ ಹಲವು ಸಮಸ್ಯೆಗಳನ್ನು ಉಂಟು ಮಾಡಿದರು. ತನ್ನ ಯಾವುದೇ ಆದೇಶವನ್ನು ಪಾಲಿಸದೇ ಕಾನೂನು ಬಾಹಿರವಾಗಿ ವರ್ತಿಸಿದರು. ನೀರಿನ ಬಿಲ್ ಹಾಗೂ ವೋಚರ್‌ಗೆಏ ತನ್ನ ನಕಲಿ ಸಹಿ ಬಳಸಿ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಾನು ಅಮಾನತು ಮಾಡಿರುವುದಾಗಿ ಜ್ಯೋತಿ ವಿವರಿಸಿದರು. ಆನಂದ್ ನಾಯ್ಕೋ ಈಗ ಗ್ರಾಪಂನ ಹೊಸ ಪಿಡಿಓ ಆಗಿ ಕಾರ್ಯನಿರ್ವಹಿಸುತಿದ್ದಾರೆ.
ಗೈರುಹಾಜರಾದ ಸದಸ್ಯರ ವಿರುದ್ಧ ಅಧ್ಯಕ್ಷೆಯಾಗಿ ತಾನು ತಾಪಂ, ಜಿಪಂ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ, ಇದರಂತೆ ಕ್ರಮಕೈಗೊಳ್ಳುವುದನ್ನು ಬಿಟ್ಟು ತಾಪಂ ಹಾಗೂ ಜಿಪಂ ಅಧಿಕಾರಿಗಳು ಹಾಗೂ ಸದಸ್ಯರು ಶಿರಿಯಾರ ಗ್ರಾಪಂನ್ನೇ ಬರ್ಖಾಸ್ತುಗೊಳಿಸಲು ಮುಂದಾಗಿದೆ. ತಾಪಂನಲ್ಲಿ ಯಾವುದೇ ಕಾರ್ಯಸೂಚಿ ಇಲ್ಲದೇ ನಿರ್ಣಯ ಮಾಡಿ ಜಿಪಂಗೆ ಕಳುಹಿಸಿರುವುದು ಕಾನೂನು ಬಾಹಿರ ಎಂದವರು ದೂರಿದರು.
ಒಬ್ಬ ದಲಿತ ಮಹಿಳೆ ಗ್ರಾಪಂನಲ್ಲಿ ಅಧ್ಯಕ್ಷೆಯಾಗಿ ಮುಂದುವರಿಯುವುದನ್ನು ತಡೆಯಲು ಹಾಗೂ ಮೀಸಲಾತಿಯನ್ನು ಕಿತ್ತುಕೊಳ್ಳುವ ಹುನ್ನಾರದಿಂದ ಇಡೀ ಗ್ರಾಪಂನ್ನೇ ಬರ್ಖಾಸ್ತುಗೊಳಿಸಲು ಜಿಪಂ ಹೊರಟಿದೆ. ಇದು ದಲಿತ ವಿರೋಧಿ ನಿರ್ಣಯ ಎಂದವರು ಖಂಡಿಸಿದರು.
ಈ ಕುರಿತು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಕ್ಷೇತರ ಸದಸ್ಯರಿಬ್ಬರು ತನಗೆ ಸಂಪೂರ್ಣ ಬೆಂಬಲ ನೀಡಿದರೂ, ತನ್ನದೇ ಪಕ್ಷದ ಸದಸ್ಯರು ಬೆಂಬಲಿಸಲಿಲ್ಲ ಎಂದರು. ತನ್ನ ಅತ್ತೆ-ಮಾವನ ಸಹಕಾರದೊಂದಿಗೆ ಜ್ಯೋತಿ ಇಂದು ದಿನವಿಡೀ ಧರಣಿ ನಡೆಸಿದರು.