×
Ad

ಅಂಗಡಿ ಮಾಲಕರ ವಿರುದ್ದ ಪೌರಾಯುಕ್ತೆ ದೂರು

Update: 2016-11-29 22:46 IST

ಪುತ್ತೂರು, ನ.29 : ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸಂಬಂಧಿಸಿ ಹೊರಟಿಸಿದ್ದ ಸುತ್ತೋಲೆಯಂತೆ ನಿಷೇಧಿತ ಪ್ಲಾಸ್ಟಿಕ್ ಪತ್ತೆ ಮಾಡಲು ಪುತ್ತೂರು ನಗರಸಭೆಯ ಅಧಿಕಾರಿಗಳು ಸೋಮವಾರ ನಗರದ ಪ್ಲಾಸ್ಟಿಕ್ ಮಾರಾಟದ ಅಂಗಡಿಗಳಿಗೆ ದಾಳಿ ನಡೆಸಿದ ವೇಳೆ ಅಂಗಡಿ ಮಾಲಕರೊಬ್ಬರು ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಕುರಿತು ನಗರಸಭೆಯ ಪೌರಾಯುಕ್ತರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

 ಪುತ್ತೂರು ಎಪಿಎಂಸಿ ರಸ್ತೆಯಲ್ಲಿ ಪ್ಲಾಸ್ಟಿಕ್ ಮಾರಾಟದ ಅಂಗಡಿ ಹೊಂದಿರುವ ಹಸನಬ್ಬ ಎಂಬವರ ವಿರುದ್ದ ದೂರು ನೀಡಲಾಗಿದ್ದು, ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು ನಗರದಲ್ಲಿರುವ ಪ್ಲಾಸ್ಟಿಕ್ ಮಾರಾಟ ಮಾಡಲಾಗುವ ಅಂಗಡಿಗಳಿಗೆ ನಗರಸಭೆಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಹಾಗೂ ಶ್ವೇತಾ ಮತ್ತು ಸಿಬ್ಬಂದಿಯೊಂದಿಗೆ ಸೋಮವಾರ ತೆರಳಿ ನಿಷೇಧಿತ ಪ್ಲಾಸ್ಟಿಕ್ ಕುರಿತು ಪರಿಶೀಲನೆ ನಡೆಸಿದ್ದು, ಎಪಿಎಂಸಿ ರಸ್ತೆಯಲ್ಲಿರುವ ಎಂ.ಎಂ.ಹಸನಬ್ಬ ಎಂಬವರ ಮಾಲಕತ್ವದ ಪ್ಲಾಸ್ಟಿಕ್ ಮಾರಾಟದ ಅಂಗಡಿಗೆ ತೆರಳಿ ಪ್ಲಾಸ್ಟಿಕ್ ಸಾಮಾಗ್ರಿಗಳ ಪರಿಶೀಲನೆ ನಡೆಸಿದಾಗ ಅಲ್ಲಿ ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳು ಪತ್ತೆಯಾಗಿದ್ದವು.

ಅಲ್ಲಿದ್ದ ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲು ತಾನು ಹಾಗೂ ಸಿಬ್ಬಂದಿ ಮುಂದಾಗಿದ್ದ ವೇಳೆ ಅಂಗಡಿ ಮಾಲಕರು ಕರ್ತವ್ಯಕೆ ಅಡ್ಡಿಪಡಿಸಿದ್ದಾರೆ ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News