ಚಹಾ ತೋಟದ ಕಾರ್ಮಿಕರ ಪ್ರತಿಭಟನೆ
ಪಶ್ಚಿಮಬಂಗಾಲ, ನ.29: ಅಧಿಕ ವೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಉಂಟಾದ ಹಣದ ಬಿಕ್ಕಟ್ಟಿನ ಪರಿಣಾಮ ಸಂಬಳ ದೊರೆಯಲು ವಿಳಂಬವಾಗಿರುವುದನ್ನು ವಿರೋಧಿಸಿ ಜಲಪಾಯ್‌ಗುರಿ ಜಿಲ್ಲೆಯಲ್ಲಿ ಚಹಾ ತೋಟದ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ನೋಟು ಅಮಾನ್ಯಗೊಳಿಸಿದ ಬಳಿಕ ಹಣಕಾಸಿನ ಸಮಸ್ಯೆಯ ಪ್ರಸ್ತುತ ಸ್ಥಿತಿಯನ್ನು ಖಂಡಿಸಿ ಘೋಷಣೆ ಕೂಗುತ್ತಾ ಸುಮಾರು ಜಿಲ್ಲೆಯ ಎಲ್ಲಾ ಚಹಾ ತೋಟಕ್ಕೆ ಸೇರಿದ 100ಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹೊರತಾಗಿಯೂ ಚಹಾ ತೋಟದ ದೈನಂದಿನ ಕೆಲಸ ಯಥಾಪ್ರಕಾರ ನಡೆದಿದೆ. ಈ ಸಂದರ್ಭ ಮಾತನಾಡಿದ ಸಿಐಟಿಯು ಮುಖಂಡ ಜಿಯಾ ಉಲ್ ಅಲಮ್, ಪಡಿತರ ವಸ್ತುಗಳನ್ನು ಪಡೆಯಲೂ ಚಹಾ ತೋಟದ ಕಾರ್ಮಿಕರು ಪರದಾಡುವಂತಾಗಿದೆ.ಕಡಿಮೆ ಮುಖಬೆಲೆಯ ನೋಟುಗಳ ಲಭ್ಯವಿಲ್ಲದ ಕಾರಣ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಜಿಲ್ಲಾ ನ್ಯಾಯಾಧೀಶರ ಖಾತೆಯಿಂದ ಆಯಾ ಚಹಾ ತೋಟದ ಮಾಲಕರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಪ್ರಕ್ರಿಯೆ ಇದುವರೆಗೆ ಚಾಲ್ತಿಯಲ್ಲಿತ್ತು. ರಿಸರ್ವ್ ಬ್ಯಾಂಕ್ ಇದೀಗ ಜಾರಿಗೊಳಿಸಿರುವ ನಿಯಮಾವಳಿಯಿಂದ ಇದಕ್ಕೆ ತೊಂದರೆಯಾಗಿದೆ. ಇದುವೇ ಸಮಸ್ಯೆಗೆ ಮೂಲ ಕಾರಣ ಎಂದು ದೂರಿದರು.
ಪ್ರಧಾನಿ ಮೋದಿ ಜಾರಿಗೊಳಿಸಿರುವ ನೋಟು ರದ್ದತಿ ಪ್ರಕ್ರಿಯೆಯನ್ನು ಇಂಟಕ್‌ನ ಜಿಲ್ಲಾ ಅಧ್ಯಕ್ಷ ಮಿಥು ಮಹಾಂತಾ ಟೀಕಿಸಿದರು. ಗ್ರಾಮೀಣ ಪ್ರದೇಶದ ಚಹಾ ತೋಟ ಕಾರ್ಮಿಕರು ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿಲ್ಲ. ಜನಧನ್ ಖಾತೆ ಹೊಂದಿರುವವರೂ ಬ್ಯಾಂಕ್‌ಗೆ ಹೋಗಬೇಕಾದರೆ ಸುಮಾರು 35 ಕಿ.ಮೀ. ಪ್ರಯಾಣಿಸುವ ಅಗತ್ಯವಿದೆ ಎಂದರು. ಕೇಂದ್ರವು ತನ್ನ ನಿರ್ಧಾರದಲ್ಲಿ ಪದೇ ಪದೇ ಬದಲಾವಣೆ ಮಾಡುತ್ತಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ ಎಂದು ಆರೋಪಿಸಿದರು.