ನೀರಿನ ರಕ್ಷಣೆ ಬಗ್ಗೆ ಶೀಘ್ರ ಕರಡು ಮಸೂದೆ: ಉಮಾ ಭಾರತಿ
ಹೊಸದಿಲ್ಲಿ, ನ.29: ಭೂಮಿಯ ಒಳಗಿನ, ಭೂಮಿಯ ಮೇಲಿನ ಹಾಗೂ ಮಳೆ ನೀರು ಸಂರಕ್ಷಿಸುವ ಬಗ್ಗೆ ಮತ್ತು ಶುದ್ಧೀಕರಿಸಿದ ನೀರನ್ನು ಕುಡಿಯುವ ಬಳಕೆಗೆ ಹೊರತಾದ ಉದ್ದೇಶಗಳಿಗೆ ಹೆಚ್ಚಾಗಿ ಬಳಸುವ ನಿಟ್ಟಿನಲ್ಲಿ ಮಾದರಿ ಕರಡು ಮಸೂದೆಯನ್ನು ಶೀಘ್ರ ಸಿದ್ದಪಡಿಸಲಾಗುತ್ತದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ತಿಳಿಸಿದ್ದಾರೆ. ನೀರು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾದ್ದರಿಂದ ಈ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಆಯ್ಕೆಯನ್ನು ರಾಜ್ಯಗಳ ವಿವೇಚನೆಗೆ ಬಿಡಲಾಗಿದೆ ಎಂದವರು ತಿಳಿಸಿದ್ದಾರೆ. ಇಲ್ಲಿ ಆರಂಭವಾದ ‘ಭೂಜಲ ಮಂಥನ-2’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮರಾಠವಾಡಾ ಮತ್ತು ಬುಂದೇರ್‌ಖಂಡದಂತಹ ಬರ ಪೀಡಿತ ಪ್ರದೇಶಗಳಲ್ಲಿ ಕ್ಷಿಪ್ರವೇಗದಲ್ಲಿ ಬರಿದಾಗುತ್ತಿರುವ ಭೂಮಟ್ಟದ ನೀರನ್ನು ಸಂರಕ್ಷಿಸುವ ಬಗ್ಗೆ ಸಲಹೆ ನೀಡುವ ನಿಟ್ಟಿನಲ್ಲಿ ಒಂದು ಸಮಿತಿಯನ್ನು ಕೂಡಾ ನೇಮಿಸಲಾಗುತ್ತದೆ .ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಪರಿಸರ ಮತ್ತು ಕೃಷಿ ಇಲಾಖೆಯ ಕಾರ್ಯದರ್ಶಿಗಳು ಸಮಿತಿಯಲ್ಲಿರುತ್ತಾರೆ. ಒಂದು ತಿಂಗಳೊಳಗೆ ಸಮಿತಿ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದವರು ತಿಳಿಸಿದರು. ಇಸ್ರೇಲ್‌ನಲ್ಲಿ ಬಳಕೆಯಾಗುತ್ತಿರುವ ಶೇ.62ರಷ್ಟು ನೀರು ಶುದ್ಧೀಕರಿಸಿದ ನೀರು. ಹಾಗಿರುವಾಗ ನಮ್ಮಲ್ಲೇಕೆ ಇದು ಸಾಧ್ಯವಿಲ್ಲ ಎಂದವರು ಪ್ರಶ್ನಿಸಿದರು.