ಹೆತ್ತವರ ಮನೆಯಲ್ಲಿ ಮಗ ಹಕ್ಕು ಚಲಾಯಿಸುವಂತಿಲ್ಲ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ, ನ.29: ಹೆತ್ತವರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿರುವವರೆಗೆ ಮಗ ಆ ಮನೆಯಲ್ಲಿ ಇರಬಹುದು ಎಂದ ಮಾತ್ರಕ್ಕೆ ಜೀವಮಾನವಿಡೀ ಮಗನ ‘ಹೊರೆ’ಯನ್ನು ಹೆತ್ತವರು ಹೊರಬೇಕು ಎಂದು ಭಾವಿಸಬಾರದು ಎಂದು ದಿಲ್ಲಿಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಇಬ್ಬರು ಪುತ್ರರು ಮತ್ತು ಸೊಸೆಯಂದಿರ ಕಾರಣ ತಮ್ಮ ಬಾಳು ನರಕಸದೃಶವಾಗಿದೆ. ಆದ್ದರಿಂದ ಪುತ್ರರ ಸ್ವಾಧೀನದಲ್ಲಿರುವ ಮನೆಯ ಭಾಗವನ್ನು ತಮ್ಮ ವಶಕ್ಕೆ ಬಿಟ್ಟುಕೊಡುವಂತೆ ನಿರ್ದೇಶನ ನೀಡಬೇಕೆಂದು ಕೋರಿ ದಿಲ್ಲಿಯ ದಂಪತಿ ಸ್ಥಳೀಯ ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿದ್ದರು. ವಿಚಾರಣೆ ವೇಳೆ ಈ ಆರೋಪ ನಿರಾಕರಿಸಿದ ದಂಪತಿಯ ಪುತ್ರರು, ಜಮೀನು ಖರೀದಿಸುವ ಮತ್ತು ಮನೆ ಕಟ್ಟುವ ಸಂದರ್ಭ ತಮ್ಮ ಕೊಡುಗೆ ಸಾಕಷ್ಟಿದೆ. ಆದ್ದರಿಂದ ತಾವು ಈ ಮನೆಯ ಜಂಟಿ ಹಕ್ಕುದಾರರು ಎಂದು ವಾದಿಸಿದ್ದರು. ಆದರೆ ಈ ವಾದವನ್ನು ತಳ್ಳಿಹಾಕಿದ್ದ ಕೋರ್ಟ್, ಹೆತ್ತವರ ಪರ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಓರ್ವ ಪುತ್ರ ದಿಲ್ಲಿ ಹೈಕೋರ್ಟ್‌ಗೆ ಅಪೀಲು ಹೋಗಿದ್ದ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರತಿಭಾ ರಾಣಿ, ಮದುವೆ ಆಗಿರಲಿ, ಆಗದಿರಲಿ.. ತನ್ನ ಹೆತ್ತವರ ಸ್ವಾಧೀನದ ಮನೆಯಲ್ಲಿ ಹಕ್ಕು ಚಲಾಯಿಸಲು ಮಗನಿಗೆ ಯಾವುದೇ ಹಕ್ಕು ಇಲ್ಲ. ಹೆತ್ತವರು ಕೃಪೆ ತೋರಿದರೆ ಮಾತ್ರ ಆತ ಮನೆಯಲ್ಲಿ , ಹೆತ್ತವರು ಸೂಚಿಸುವವರೆಗೆ ಜೀವನ ಸಾಗಿಸಬಹುದು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.