ನೋಟು ರದ್ದತಿ: ಲಾಲೂ ತಿಪ್ಪರಲಾಗ

Update: 2016-11-30 03:30 GMT

ಪಾಟ್ನಾ, ನ.30: ನೋಟು ಅಮಾನ್ಯ ವಿರೋಧಿ ಪಾಳಯದಿಂದ ಹೊರಬಂದಿರುವ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಮಂಗಳವಾರ ಮಾತನಾಡಿ, "ನೋಟು ಅಮಾನ್ಯ ಹಿಂದಿನ ಉದ್ದೇಶದ ಬಗ್ಗೆ ನನ್ನ ವಿರೋಧವಿಲ್ಲ. ಆದರೆ ಅದನ್ನು ಅನುಷ್ಠಾನಗೊಳಿಸಿದ ಮಾರ್ಗವನ್ನಷ್ಟೇ ನಾನು ವಿರೋಧಿಸುತ್ತೇನೆ" ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನೋಟು ಅಮಾನ್ಯ ನಿರ್ಧಾರವನ್ನು ಆರಂಭದಿಂದಲೂ ಬೆಂಬಲಿಸುತ್ತಾ ಬಂದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿರ್ಧಾರವನ್ನು ಇದೀಗ ಲಾಲೂ ಅನುಮೋದಿಸಿದ್ದಾರೆ. ಆರ್‌ಜೆಡಿ ಹಾಗೂ ಜೆಡಿಯು, ಬಿಹಾರದ ಆಡಳಿತಾರೂಢ ಮಹಾಮೈತ್ರಿಯ ಅಂಗಪಕ್ಷಗಳಾಗಿದ್ದು, ಕಾಂಗ್ರೆಸ್ ಈ ಕೂಟದ ಇನ್ನೊಂದು ಅಂಗಪಕ್ಷ.

ಈ ಮುನ್ನ ಮಂಗಳವಾರ ಬೆಳಿಗ್ಗೆ ವಿಧಾನಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರ ನಡುವೆ ಮಾತಿನ ಸಮರ ನಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಲಾಲೂ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದರು. ಆ ಬಳಿಕ ಲಾಲೂ, ಸಿಎಂ ಸಮ್ಮುಖದಲ್ಲೇ ಪಕ್ಷದ ಶಾಸಕರನ್ನು ಉದ್ದೇಶಿಸಿ ಮಾತನಾಡಿ, "ನಾನು ನೋಟು ಅಮಾನ್ಯ ನಿರ್ಧಾರವನ್ನು ಬೆಂಬಲಿಸುತ್ತೇನೆ. ಆದರೆ ಅದನ್ನು ಅನುಷ್ಠಾನಗೊಳಿಸಿದ ಕೇಂದ್ರದ ವಿಧಾನವನ್ನಷ್ಟೇ ವಿರೋಧಿಸುತ್ತೇನೆ" ಎಂದು ಸ್ಪಷ್ಟಪಡಿಸಿದರು.
"ಇಬ್ಬರೂ ಮುಖಂಡರು ನೋಟು ಅಮಾನ್ಯ ನಿರ್ಧಾರ ಬೆಂಬಲಿಸಿದ್ದಾರೆ. ಆದರೆ ಕೇಂದ್ರ ಇದಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳದ ಕಾರಣದಿಂದ ಜನ ಬವಣೆ ಅನುಭವಿಸುವಂತಾಗಿದೆ ಎನ್ನುವುದು ಲಾಲೂ ಅಭಿಮತ" ಎಂದು ಆರ್‌ಜೆಡಿ ಶಾಸಕ ಅನ್ವರ್ ಅಲಮ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News