ಬ್ಯಾಂಕಲ್ಲಿ ದುಡ್ಡಿಲ್ಲ: ಪತ್ನಿಯ ಅಂತ್ಯಕ್ರಿಯೆಗಾಗಿ ಕಾದು ಕುಳಿತ ಕಾರ್ಮಿಕ
ನೋಯ್ಡ, ನ.30: ನೋಟು ಅಮಾನ್ಯ ನಿರ್ಧಾರದ ಬಳಿಕ ದೇಶದಲ್ಲಿ ಉದ್ಭವಿಸಿರುವ ನೋಟು ಬಿಕ್ಕಟ್ಟು ಸ್ಥಿತಿ ಇನ್ನೂ ತಿಳಿಯಾಗಿಲ್ಲ. ಸ್ಥಳೀಯ ಬ್ಯಾಂಕಿನಲ್ಲಿ ಹಣ ಸಿಕ್ಕದ ಪರಿಣಾಮವಾಗಿ ಇಲ್ಲಿನ ಜೆ.ಜೆ.ಕ್ಲಸ್ಟರ್‌ನ ದಿನಗೂಲಿ ಕಾರ್ಮಿಕನೊಬ್ಬ ತನ್ನ ಪತ್ನಿಯ ಶವಸಂಸ್ಕಾರಕ್ಕೆ ಕಾದು ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
65 ವರ್ಷದ ಮುನ್ನಿಲಾಲ್, ಪ್ಲಾಸ್ಟಿಕ್ ಡೇರೆಯಲ್ಲಿ ಪತ್ನಿಯ ಶವ ಪಕ್ಕಕ್ಕಿಟ್ಟುಕೊಂಡು ಕಾಯುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು. ಹೊಟ್ಟೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಫೂಲನ್‌ದೇವಿ (61) ನೋಯ್ಡ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದರು.
"ಮುಂಜಾನೆ 8ಕ್ಕೆ ನಾನು ಧರ್ಮಶೀಲ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದೆ. ಅಲ್ಲಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೋಗಲು ಸೂಚಿಸಿದರು. ಆಟೊದಲ್ಲಿ ಅಲ್ಲಿ ಹೋದ ಬಳಿಕ ಮಧ್ಯಾಹ್ನ 2ರ ವೇಳೆಗೆ ಆಕೆ ಮೃತಪಟ್ಟಳು. ಸಿರಿಂಜ್, ಆಹಾರ ಹಾಗೂ ಔಷಧಿಗೆ 600-700 ರೂಪಾಯಿ ನೀಡಬೇಕಾಯಿತು" ಎಂದು ಲಾಲ್ ವಿವರಿಸಿದರು.
ಲಾಲ್ ಸೋಮವಾರ ಸಂಜೆ ತನ್ನ ಒಂಟಿ ಕೊಠಡಿಯ ಮನೆಗೆ ಮರಳಿದಾಗ, ಪತ್ನಿಯ ಅಂತ್ಯಸಂಸ್ಕಾರಕ್ಕೆ ಹಣ ಇರಲಿಲ್ಲ. ತಕ್ಷಣ ಸೆಕ್ಟರ್ 9ರಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ತೆರಳಿದರು. ಅಲ್ಲಿ ಮಗನ ಖಾತೆ ಇತ್ತು. "ಇಬ್ಬರು ಮಕ್ಕಳು ಉತ್ತರಪ್ರದೇಶದ ಗೊಂಡಾ ಜಿಲ್ಲೆಯಿಂದ ರೈಲಿನಲ್ಲಿ ಬರುತ್ತಿದ್ದಾರೆ. ಒಬ್ಬ ಮಗನ ಖಾತೆಯಲ್ಲಿ 16 ಸಾವಿರ ರೂಪಾಯಿ ಇದೆ. ಹಲವು ಗಂಟೆ ಕಾಲ ಬ್ಯಾಂಕಿನಲ್ಲಿ ಕಾದರೂ, ಬ್ಯಾಂಕ್ ಪ್ರಬಂಧಕ ನಗದು ಇಲ್ಲ ಎಂದು ಹೇಳಿ ವಾಪಸ್ ಕಳುಹಿಸಿದರು. ನಾನು ಪರಿಸ್ಥಿತಿ ವಿವರಿಸಿದರೂ ಯಾರೂ ನೆರವಿಗೆ ಬರಲಿಲ್ಲ" ಎಂದು ಹೇಳಿದರು.
ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಸೋಮವಾರ ನಗದು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಮರುದಿನ ಬೆಳಗ್ಗೆ 10ಕ್ಕೆ ಲಾಲ್ ಅವರ ನೆರೆಯವರು ಬ್ಯಾಂಕಿಗೆ ಹೋದರೂ ನಗದು ಇಲ್ಲ ಎಂಬ ಉತ್ತರವೇ ಬಂತು. ಅಂತಿಮವಾಗಿ ಪೊಲೀಸ್ ಅಧಿಕಾರಿಯೊಬ್ಬರು 2,500 ರೂಪಾಯಿ ನೀಡಿದರು. ರಾಜಕಾರಣಿಯೊಬ್ಬರು 5 ಸಾವಿರ ರೂ. ನೆರವು ನೀಡಿದರು. ಆದರೆ ಬೇರೆಯವರಿಂದ ಪಡೆದ ಹಣದಲ್ಲಿ ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸುವುದನ್ನು ಆಕೆ ಇಷ್ಟಪಡಲಾರಳು. ಅಂತಿಮವಾಗಿ ಜಿಲ್ಲಾಡಳಿತ ಬ್ಯಾಂಕಿಗೆ ಹಣದ ವ್ಯವಸ್ಥೆ ಮಾಡಿತು. ಮಗನ ಖಾತೆಯಿಂದ 15 ಸಾವಿರ ರೂಪಾಯಿ ತೆಗೆದಿದ್ದೇವೆ. ಬುಧವಾರ ಬೆಳಗ್ಗೆ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ ಎಂದು ಅವರು ವಿವರಿಸಿದರು.