×
Ad

ವಿಶ್ವದ ಅತಿದೊಡ್ಡ ಸೌರಶಕ್ತಿ ಉತ್ಪಾದನಾ ಘಟಕ ಭಾರತದಲ್ಲಿ ಸಿದ್ಧ

Update: 2016-11-30 10:53 IST

ಹೊಸದಿಲ್ಲಿ. ನ.30: ವಿಶ್ವದ ಅತೀ ದೊಡ್ಡ ಸೌರಶಕ್ತಿ ಉತ್ಪಾದನಾ ಘಟಕ ದಕ್ಷಿಣ ಭಾರತದಲ್ಲಿ ಸ್ಥಾಪನೆಯಾಗಿದೆ. ತಮಿಳುನಾಡಿನ ಕಮುಥಿ ಎಂಬ ಪಟ್ಟಣದಲ್ಲಿರುವ ಈ ಸ್ಥಾವರವು 648 ಮೆ.ವಾ. ಸಾಮರ್ಥ್ಯ ಹೊಂದಿದೆಯಲ್ಲದೆ 10 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಸ್ಥಾಪಿತವಾಗಿದೆ. ಇಲ್ಲಿಯ ತನಕ ವಿಶ್ವದ ಅತೀ ದೊಡ್ಡ ಸೋಲಾರ್ ಘಟಕವೆಂದು ಖ್ಯಾತಿ ಪಡೆದಿದ್ದ 550 ಮೆ.ವಾ. ಸಾಮರ್ಥ್ಯದ ಕ್ಯಾಲಿಫೋರ್ನಿಯಾದ ಟೊಪಾರ್ ಸೋಲಾರ್ ಫಾರ್ಮ್ ಅನ್ನು ಇದು ಹಿಂದಿಕ್ಕಿದೆ.

ಕಮುಥಿಯ ಸೌರವಿದ್ಯುತ್ ಘಟಕ ಎಂಟು ತಿಂಗಳ ಅವಧಿಯಲ್ಲಿ ನಿರ್ಮಾಣವಾಗಿದ್ದು, ಪ್ರತಿ ದಿನ ಅದರದೇ ಸೋಲಾರ್ ಪ್ಯಾನೆಲ್ ಗಳಿಂದ ಚಾರ್ಜ್ ಮಾಡಲ್ಪಟ್ಟ ರೊಬೋಟಿಕ್ ವ್ಯವಸ್ಥೆಯಿಂದ ಅದನ್ನು ಶುದ್ಧೀಕರಿಸಲಾಗುತ್ತದೆ. ತನ್ನ ಪೂರ್ಣ ಸಾಮರ್ಥ್ಯವನ್ನು ಅದು ಉಪಯೋಗಿಸಿದಾಗ ಅದು ಸುಮಾರು 1.5 ಲಕ್ಷ ಮನೆಗಳಿಗೆ ವಿದ್ಯುತ್ ಒದಗಿಸಬಹುದಾಗಿದೆ.
ಈ ಯೋಜನೆಯಲ್ಲಿ 25 ಲಕ್ಷ ಸೋಲಾರ್ ಮೊಡ್ಯೂಲ್ ಗಳಿದ್ದು, ಅದನ್ನು ಸ್ಥಾಪಿಸಲು 679 ಮಿಲಿಯನ್ ಡಾಲರ್ ವೆಚ್ಚವಾಗಿದೆ. ಈ ಸ್ಥಾವರದಿಂದಾಗಿ ಭಾರತದ ಒಟ್ಟು ಸೌರ ವಿದ್ಯುತ್ ಸಾಮರ್ಥ್ಯವು 10 ಗಿಗಾ ವಾಟ್ ದಾಟಿದೆಯೆಂದು ಸಂಶೋಧನಾ ಸಂಸ್ಥೆ ಬ್ರಿಡ್ಜ್ ಟು ಇಂಡಿಯಾ ಹೇಳಿಕೊಂಡಿದೆ.
ತನ್ನ ಸೌರ ವಿದ್ಯುತ್ ತಯಾರಿ ಸಾಮರ್ಥ್ಯವನ್ನು ಭಾರತವು ಹೆಚ್ಚಿಸಿದ್ದೇ ಆದಲ್ಲಿ ಅದು ಚೀನಾ ಹಾಗೂ ಅಮೆರಿಕ ದೇಶಗಳ ನಂತರ ಮೂರನೇ ಅತಿ ದೊಡ್ಡ ಸೌರ ವಿದ್ಯುತ್ ಉತ್ಪಾದನಾ ರಾಷ್ಟ್ರವಾಗಲಿದೆ.
2022 ರೊಳಗಾಗಿ ಭಾರತ 6 ಕೋಟಿ ಮನೆಗಳನ್ನು ಬೆಳಗಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News