ಮರಳು ಮಾಫಿಯಾ ಮಟ್ಟ ಹಾಕದಿದ್ದಲ್ಲಿ ಬೀದಿಗಿಳಿದು ಹೋರಾಟ: ಪಾಲೆಮಾರ್ ಎಚ್ಚರಿಕೆ

Update: 2016-11-30 15:08 GMT

ಮಂಗಳೂರು,ನ.30: ನಗರ ಸಹಿತ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿದ್ದು, ಒಂದು ತಿಂಗಳೊಳಗೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯ ನಿರೀಕ್ಷೆಯಲ್ಲಿ ಜನರು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಆದರೆ, ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ಜಿಲ್ಲಾಡಳಿತ ಸಹಿತ ಸರಕಾರ ಕೇವಲ ಪ್ರಚಾರ ಪಡೆಯಲು ಸೀಮಿತವಾಗಿದೆ. ಅಭಿವೃದ್ಧಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗೆ ಲಿಖಿತ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.

ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಕೈಗೊಂಡ ಕಾರ್ಯಗಳನ್ನು ಕಳಪೆ ಮಾಡುವುದಷ್ಟೇ ಕಾಂಗ್ರೆಸ್ ಸರಕಾರದ ಸಾಧನೆಯಾಗಿದೆ. ಹೊಸ ಕಾಮಗಾರಿಗಳಿಗೆ ಚಾಲನೆ ನೀಡುತ್ತಿಲ್ಲ. ಜಿಲ್ಲೆಯನ್ನು ಮರಳು ಮಾಫಿಯಾ ನಿಯಂತ್ರಿಸುತ್ತಿದ್ದು, ಸಾರ್ವಜನಿಕರು ದೂರು ನೀಡಿದರೆ ಜಿಲ್ಲಾಧಿಕಾರಿಗಳು, ಸಚಿವರು ಕ್ರಮಕೈಗೊಳ್ಳುತ್ತಿಲ್ಲ. ಗಣಿ ಇಲಾಖೆಯ ಅಧಿಕಾರಿ ನಾಗೇಂದ್ರರನ್ನು ವರ್ಗಾವಣೆ ಮಾಡಿರುವುದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗಿದೆ ಎಂದು ಪಾಲೆಮಾರ್ ಹೇಳಿದರು.

ಎಂಆರ್‌ಪಿಎಲ್ ರಸ್ತೆ ಅಭಿವೃದ್ಧಿಗೆ ಎಂಆರ್‌ಪಿಎಲ್ ಹಣ ನೀಡಲು ಮುಂದಾದರೂ ಪಾಲಿಕೆ ಜವಾಬ್ದಾರಿ ವಹಿಸಿಕೊಂಡಿಲ್ಲ. ನಗರ ಪಾಲಿಕೆಯಲ್ಲೂ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಮುಡಾ ಅಧ್ಯಕ್ಷರ ಹುದ್ದೆ 3 ತಿಂಗಳಿನಿಂದ ಖಾಲಿಯಿದ್ದು ಪ್ರಾಧಿಕಾರದ ಅನೇಕ ಕೆಲಸ ಕಾರ್ಯಗಳು ಬಾಕಿಯುಳಿದಿವೆ. ಈ ಬಗ್ಗೆ ಜವಾಬ್ದಾರಿ ವಹಿಸಬೇಕಾದ ಜಿಲ್ಲಾಧಿಕಾರಿ ಮೂರು ತಿಂಗಳಿನಿಂದ ಸಭೆ ನಡೆಸದ ಕಾರಣ ಕಡತಗಳು ಬಾಕಿ ಉಳಿದಿವೆ ಎಂದು ಪಾಲೆಮಾರ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಡಾ.ವೈ. ಭರತ್ ಶೆಟ್ಟಿ ಹಾಗೂ ಮಾಧ್ಯಮ ವಕ್ತಾರ ರಾಜೇಶ್ ಕೊಟ್ಟಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News