ಎಚ್ಚರ ! ನಿಮಗೆ ಎಟಿಎಂ ಕಾರ್ಡ್ ವಿವರ ಕೇಳಿ ಕಾಲ್ ಬಂದಿದೆಯೇ ?

Update: 2016-11-30 08:00 GMT

ನೋಟು ರದ್ದತಿ ಬಳಿಕ ಹಳೆ ನೋಟು ಬದಲಾವಣೆ, ಖರ್ಚಿಗೆ ಹಣ ಹೊಂದಿಸುವ ಹೆಣಗಾಟ, ಬ್ಯಾಂಕ್ ಗಳಲ್ಲಿ ಹಣದ ಕೊರತೆಯ ಸಮಸ್ಯೆ ಇತ್ಯಾದಿಗಳ ನಡುವೆ ರಿಸರ್ವ್ ಬ್ಯಾಂಕ್ ಹೆಸರಲ್ಲಿ ದೂರವಾಣಿ ಕರೆ ಮಾಡಿ ವಂಚಿಸುವ ಪ್ರಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. 
ಸಾಮಾನ್ಯವಾಗಿ ಮೊಬೈಲ್ ಸಂಖ್ಯೆಯಂತ ಕಾಣುವ ಸಂಖ್ಯೆಯಿಂದ ಬರುವ ಕರೆಯನ್ನು ಸ್ವೀಕರಿಸಿದ ಕೂಡಲೇ  ನಿಮ್ಮ ಪೂರ್ಣ ಹೆಸರನ್ನು ಅವರೇ ಹೇಳಿ ಬಳಿಕ " ನಾವು ರಿಸರ್ವ್ ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ. ನಾವು ಎಲ್ಲ ಎಟಿಎಂ ಬಳಕೆದಾರರ ಮಾಹಿತಿ ದೃಢೀಕರಣ ಮಾಡುತ್ತಿದ್ದೇವೆ. ನಿಮ್ಮ ಎಟಿಎಂ ನ ವಿವರಗಳನ್ನು ಕೊಡಿ. ನಿಮ್ಮ ಎಟಿಎಂ ನ ಪಿನ್ ನಂಬರ್ ನಮಗೆ ಬೇಡ . ಕೇವಲ ಕಾರ್ಡ್ ನಂಬರ್ ಕೊಡಿ " ಎಂದು ಕೇಳುತ್ತಾರೆ. 
ನೀವು ಕೊಡುವುದಿಲ್ಲ ಎಂದು ಹೇಳಿದರೆ " ಇದು ಸರಕಾರದಿಂದ ನಡೆಯುತ್ತಿರುವ ದೃಢೀಕರಣ ಕೆಲಸ. ನೀವು ಸರಕಾರದ ಕೆಲಸದಲ್ಲಿ ಸಹಕಾರ ನೀಡುತ್ತಿಲ್ಲ. ನೀವು ಹೀಗೆ ಮಾಡಿದರೆ ನಿಮ್ಮ ಎಟಿಎಂ ಅನ್ನು ನಾವು ಬ್ಲಾಕ್ ಮಾಡುತ್ತೇವೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣ ಮುಟ್ಟುಗೋಲು ಹಾಕುತ್ತೇವೆ" ಎಂದು ಹೇಳುತ್ತಾರೆ. ಕಾಲ್ ಕಟ್ ಮಾಡಿದರೆ ಮತ್ತೆ ಕಾಲ್ ಮಾಡಿ ಅದೇ ರೀತಿ ಪುನರಾವರ್ತಿಸುತ್ತಾರೆ. 

ಈ ಬಗ್ಗೆ ಎಲ್ಲರೂ ಜಾಗೃತರಾಗುವಂತೆ ಆರ್ ಬಿಐ ಹಾಗು ಬ್ಯಾಂಕ್ ಎಚ್ಚರಿಕೆ ನೀಡಿದೆ. ಏಕೆಂದರೆ ಬ್ಯಾಂಕ್ ಅಥವಾ ರಿಸರ್ವ್ ಬ್ಯಾಂಕ್ ಯಾವತ್ತೂ ಗ್ರಾಹಕರಿಗೆ ಕರೆ ಮಾಡಿ ಅವರ ಎಟಿಎಂ ಕಾರ್ಡ್ ವಿವರಗಳನ್ನು ಕೇಳುವುದಿಲ್ಲ. ಈಗ ನೋಟು ರದ್ದತಿ ಬಳಿಕದ ಗೊಂದಲದ ದುರುಪಯೋಗ ಮಾಡಿಕೊಳ್ಳಲು ವಂಚಕರು ಪ್ರಯತ್ನಿಸುತ್ತಿದ್ದಾರೆ ಎಂದು ಅದು ತಿಳಿಸಿದೆ. 

ಈ ರೀತಿಯಾದ ವಂಚನೆಯ ಬಗ್ಗೆ ಸ್ವತಃ ಜಾಗೃತರಾಗುವುದು ಮಾತ್ರವಲ್ಲದೆ ತಮ್ಮ ಮನೆಯಲ್ಲಿ, ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ಎಟಿಎಂ ಬಳಸುವವರಿಗೆ ಈ ಬಗ್ಗೆ ತಿಳಿಹೇಳಬೇಕಿದೆ. ವಿಶೇಷವಾಗಿ ಗೃಹಿಣಿಯರು, ಹಿರಿಯ ನಾಗರಿಕರನ್ನು ಈ ಬಗ್ಗೆ ಎಚ್ಚರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News