ಸಮುದ್ರಪಾಲಾಗುತ್ತಿದ್ದ ಯುವಕನ ರಕ್ಷಣೆ
Update: 2016-11-30 17:35 IST
ಉಳ್ಳಾಲ, ನ.30: ಸೋಮೇಶ್ವರ ಸಮುದ್ರತೀರದಲ್ಲಿರುವ ರುದ್ರಪಾದೆಯಿಂದ ಕಾಲು ಜಾರಿ ಸಮುದ್ರದಕ್ಕೆ ಬಿದ್ದಿದ್ದ ಯುವಕನೋರ್ವನನ್ನು ಈಜುರಕ್ಷಕ ದಳದ ಸಿಬ್ಬಂದಿ ಮತ್ತು ನಾಡದೋಣಿ ನಾವಿಕರಿಬ್ಬರು ರಕ್ಷಿಸಿದ್ದಾರೆ.
ದೇರಳಕಟ್ಟೆಯ ರೆಂಜಾಡಿ ನಿವಾಸಿ ಸತೀಶ್(30)ಎಂಬವರೇ ರಕ್ಷಣೆಗೊಳಗಾದ ಯುವಕ.
ಅವರು ಬುಧವಾರ ಬೆಳಗ್ಗೆ ಸೋಮೇಶ್ವರಕ್ಕೆ ಬಂದು ಅಲ್ಲಿಯ ರುದ್ರಪಾದೆಯಲ್ಲಿ ನಿಂತಿದ್ದರೆನ್ನಲಾಗಿದೆ. ಈ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನೀರುಪಾಲಾಗುತ್ತಿದ್ದರು. ಇದನ್ನು ಕಂಡ ಈಜುರಕ್ಷಕರಾದ ಅಶೋಕ್ ಮತ್ತು ನಾಡದೋಣಿ ನಾವಿಕ ಶ್ಯಾಮ್, ಸಮುದ್ರಕ್ಕೆ ಜಿಗಿದು ಸತೀಶ್‌ರನ್ನು ದಡಕ್ಕೆ ಎಳೆದಿದ್ದಾರೆ.
ಅದಾಗಲೇ ನೀರು ಕುಡಿದಿದ್ದ ಸತೀಶ್ ಅರೆಪ್ರಜ್ಞಾವಸ್ಥೆ ತಲುಪಿದ್ದರೂ ಅಶೋಕ್ ಮತ್ತು ಶ್ಯಾಮ್ ಪ್ರಥಮ ಚಿಕಿತ್ಸೆ ನೀಡಿದ ಪರಿಣಾಮ ಸತೀಶ್ ಚೇತರಿಸಿಕೊಂಡಿದ್ದಾರೆ. ಬಳಿಕ ಅವರನ್ನು ಉಳ್ಳಾಲ ಪೊಲೀಸರು ಮಂಗಳೂರಿನ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.