×
Ad

ದಲಿತರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ: ದಲಿತ ಮುಖಂಡರ ಆಕ್ರೋಶ

Update: 2016-11-30 17:49 IST

ಪುತ್ತೂರು, ನ.30: ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ ನಡೆಯಿತು.

ದಲಿತರ ಸಮಸ್ಯೆ ಬಗ್ಗೆ ನೀಡಿದ ಹಲವು ಮನವಿಗಳಿಗೆ ಇನ್ನೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಡಿಸಿ ಮನ್ನಾ ಭೂಮಿಯನ್ನು ಮಂಜೂರು ಮಾಡಲು ಅರ್ಜಿ ನೀಡಿದರೆ, ಸೂಕ್ತ ಮಾಹಿತಿಯನ್ನೇ ನೀಡುತ್ತಿಲ್ಲ. ಶ್ರೀಮಂತ ವರ್ಗಕ್ಕೆ ಈಗಾಗಲೇ ಡಿಸಿ ಮನ್ನಾ ಭೂಮಿಯನ್ನು ಮಂಜೂರು ಮಾಡಲಾಗಿದೆ. ಆದರೆ ಬಡವರನ್ನು ಸತಾಯಿಸಲಾಗುತ್ತಿದೆ. ಅಧಿಕಾರಿಗಳು ಪದೇ ಪದೇ ವರ್ಗಾವಣೆ ಆಗುತ್ತಿರುವುದರಿಂದ ಕೆಲಸ ಇನ್ನಷ್ಟು ವಿಳಂಬವಾಗುತ್ತಿದೆ. ಹೊಸ ಅಧಿಕಾರಿ ಬಂದಾಗ ಮತ್ತೆ ತೆರಳಿ, ವಿಷಯವನ್ನು ಮನವರಿಕೆ ಮಾಡಿಕೊಡಬೇಕು. ಪ್ರತಿ ಅಧಿಕಾರಿಯ ಬಳಿ ತೆರಳಿ ವಿಷಯ ವಿವರಿಸಬೇಕು ಎಂದಾದರೆ, ಸಭೆಯ ಔಚಿತ್ಯವೇನು? ಸಭೆಯಲ್ಲಿ ನೀಡಿದ ಮನವಿಗೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಗೆ ಹಾಜರಾಗಬೇಕಾದರೆ ಒಂದು ದಿನದ ಸಂಬಳವನ್ನು ತ್ಯಾಗ ಮಾಡಬೇಕು. ಸಭೆಗೆ ಆಗಮಿಸಿಯೂ ಕೆಲಸ ಆಗಲಿಲ್ಲವೆಂದರೆ, ಮುಂದಿನ ಸಭೆಗೆ ಬರಲು ಒಪ್ಪುವುದಿಲ್ಲ. ಚಾ, ಬಿಸ್ಕೆಟ್‌ಗಷ್ಟೇ ದಲಿತ ಕುಂದುಕೊರತೆ ಸಭೆ ಮೀಸಲಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದರು.

ದಲಿತ ಮುಖಂಡರನ್ನು ಸಮಾಧಾನಪಡಿಸಿದ ತಹಶೀಲ್ದಾರ್ ಅನಂತಶಂಕರ್ ವರ್ಗಾವಣೆ ಸರಕಾರದ ಕ್ರಮ. ಹಾಗೆಂದು ಯಾವುದೇ ಕೆಲಸಗಳನ್ನು ವಿಳಂಬ ಮಾಡುತ್ತಿಲ್ಲ. ನಾನು ಅಧಿಕಾರ ವಹಿಸಿ ಎರಡು ತಿಂಗಳಷ್ಟೇ ಆಗಿದೆ. ಸಮಸ್ಯೆಯ ಬಗ್ಗೆ ವಿಮರ್ಶಿಸಿ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದರು.

ದಲಿತ ಸೇವಾ ಸಮಿತಿ ಅಧ್ಯಕ್ಷ ಗಿರಿಧರ್ ನಾಯ್ಕ ಮಾತನಾಡಿ, ಗುರುಂಪುನಾರ್ ಕಾಲನಿಗೆ ರಸ್ತೆ ನಿರ್ಮಿಸುವಂತೆ ಒತ್ತಾಯಿಸುತ್ತಾ ಬಂದಿದ್ದೇವೆ. ಆದರೆ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ. ಸಹಾಯಕ ಆಯುಕ್ತರಿಗೆ ಮನವಿ ನೀಡಿದರೆ, ಸ್ಥಳಕ್ಕೆ ಭೇಟಿ ನೀಡುವ ಕೆಲಸವನ್ನೂ ಮಾಡಿಲ್ಲ. ಪೊಲೀಸ್ ಇಲಾಖೆ ಮುತುವರ್ಜಿ ವಹಿಸಿದರೂ ಕಂದಾಯ ಇಲಾಖೆ ಸಹಕರಿಸುತ್ತಿಲ್ಲ. ಸಮಸ್ಯೆ ಬಗ್ಗೆ ಈಗಲೇ ಸೂಕ್ತ ಭರವಸೆ ನೀಡದೇ ಹೋದರೆ, ಸಭೆಯಿಂದ ಹೊರಗೆ ಹೋಗುವುದಾಗಿ ಎಚ್ಚರಿಸಿದರು.

ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅನಂತಶಂಕರ್, ಇಂದೇ ಸರ್ವೇಯರನ್ನು ಕರೆದುಕೊಂಡು ಸ್ಥಳ ಭೇಟಿ ಮಾಡುವುದಾಗಿ ಭರವಸೆ ನೀಡಿದರು.
ಕಾಯರಪ್ಪು ದಲಿತ ಕಾಲನಿಯಲ್ಲಿ 26 ಮನೆಗಳಿವೆ. ಆದರೆ ರಸ್ತೆಯೇ ಇಲ್ಲ. ರಸ್ತೆ ನಿರ್ಮಾಣಕ್ಕೆ ಆರ್ಯಾಪು ಗ್ರಾಮ ಪಂಚಾಯತ್ ಹಿಂದೇಟು ಹಾಕುತ್ತಿದೆ. ಅನುದಾನ ಕೊರತೆ ಇದ್ದರೆ, ತಾಪಂ, ಜಿಪಂಗೆ ಪತ್ರ ಬರೆಯಬಹುದಿತ್ತು. ಅಂತಹ ಕೆಲಸವನ್ನೂ ಮಾಡುತ್ತಿಲ್ಲ ಎಂದು ಕೆಲವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪುತ್ತೂರು ತಾಲೂಕಿನ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದ ದಲಿತ ಮುಖಂಡ ಎಂ. ಕೂಸಪ್ಪ, ಕುಳ್ಳೇಗೌಡ ತಹಶೀಲ್ದಾರ್ ಆಗಿದ್ದಾಗ, ಪತ್ರಿಕೆಯಲ್ಲಿ ಪ್ರಕಟವಾದ ಸಮಸ್ಯೆಗೂ ತಕ್ಷಣ ಸ್ಪಂದನೆ ನೀಡುತ್ತಿದ್ದರು. ಆದರೆ ಇಂದು ಅಧಿಕಾರಿಗಳಿಗೆ ಮನವಿ ನೀಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಹೊಸ ತಹಸೀಲ್ದಾರ್ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ ಎಂದರು.

ಬಾಲಚಂದ್ರ ಸೊರಕೆ ಮಾತನಾಡಿ, ಸರಕಾರಿ ಉದ್ಯೋಗಿಗಳಿಗೆ ಸೈಟ್ ನೀಡುವಂತಿಲ್ಲ. ಆದರೆ ಹಿಂದೆ ಕಬಕದಲ್ಲಿ ವಿಎ ಆಗಿದ್ದು, ಇದೀಗ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ವೇದಾವತಿ ಎಂಬವರಿಗೆ ಕೆಮ್ಮಿಂಜೆ ಗ್ರಾಮದ ನೈತಾಡಿ ಎಂಬಲ್ಲಿ ನಿವೇಶನ ನೀಡಲಾಗಿದೆ. ಜುಲೈ ತಿಂಗಳಿನಲ್ಲಿ ನಡೆದ ಸಭೆಯಲ್ಲಿ ಇದರ ಬಗ್ಗೆ ದೂರು ನೀಡಲಾಗಿದೆ. ಆದರೆ ಇದೀಗ ನೋಡಿದರೆ, ಮನೆ ಕಾಮಗಾರಿ ಪೂರ್ಣಗೊಂಡಿದೆ. ಮಾಹಿತಿ ನೀಡಿಯೂ ಅಧಿಕಾರಿಗಳು ಸುಮ್ಮನೆ ಕುಳಿತಿದ್ದೇಕೆ ಎಂದು ಬಾಲಚಂದ್ರ ಸೊರಕೆ ಗಮನ ಸೆಳೆದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಸಭೆಯಲ್ಲಿ ಕಡಬ ತಹಶೀಲ್ದಾರ್ ಬಿ. ಲಿಂಗಯ್ಯ, ನಗರ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಸಂಪ್ಯ ಠಾಣಾ ಎಸೈ ಅಬ್ದುಲ್ ಖಾದರ್, ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯೆ ಮೀನಾಕ್ಷಿ ಎಂ. ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News