×
Ad

ಸಾಸ್ತಾನ ಟೋಲ್‌ಗೇಟ್ ಎದುರು ಸಾರ್ವಜನಿಕರ ಪ್ರತಿಭಟನೆ

Update: 2016-11-30 19:53 IST

ಸಾಸ್ತಾನ, ನ.30: ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾಸ್ತಾನದಲ್ಲಿ ನಿರ್ಮಿಸಿರುವ ಸುಂಕವಸೂಲಾತಿ ಕೇಂದ್ರದಲ್ಲಿ (ಟೋಲ್‌ಗೇಟ್) ಸುಂಕ ವಸೂಲಾತಿಗೆ ಅವಕಾಶ ನೀಡುವುದಿಲ್ಲ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಸಾರ್ವಜನಿಕರು ಇಂದು ಸಾಸ್ತಾನದ ಟೋಲ್‌ಗೇಟ್ ಎದುರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಉಡುಪಿ ಜಿಲ್ಲೆ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಲಾರಿ ಮಾಲಕರ ಮತ್ತು ಚಾಲಕರ ಸಂಘ ಸೇರಿದಂತೆ ವಿವಿಧ ಸಂಘಸಂಸ್ಥೆ, ಸಂಘಟನೆಗಳ ಸಹಯೋಗದೊಂದಿಗೆ ಇಂದಿನ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ, ರಾ.ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆ ಪಡೆದಿರುವ ನವಯುಗ ಕಂಪೆನಿಯು ಡಿ.2ರಿಂದ ಸುಂಕ ವಸೂಲಾತಿಯನ್ನು ಆರಂಭಿಸುವ ಮಾಹಿತಿ ಲಭಿಸಿದ್ದು, ರಸ್ತೆ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸದೇ ಸುಂಕ ವಸೂಲಿಗೆ ಮುಂದಾಗುವುದು ಕಾನೂನು ಬಾಹಿರವಾಗಿದೆ ಎಂದರು.

ನವಯುಗ ಕಂಪೆನಿ 2013ರಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸ ಬೇಕಿತ್ತು. ಆದರೆ ಇನ್ನೂ ಜಿಲ್ಲೆಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅದಕ್ಕೆ ಸಾಧ್ಯವಾಗಿಲ್ಲ. ಕಾನೂನಿನಂತೆ ಟೋಲ್ ಸಂಗ್ರಹಿಸುವ ಮೊದಲು ಟೋಲ್‌ಫ್ಲಾಜಾದ ಎರಡೂ ಕಡೆಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಿಸಬೇಕಾಗಿದೆ. ಆದರೆ ಸಾಸ್ತಾನದಲ್ಲಾಗಲಿ ಅಥವಾ ದಕ್ಷಿಣದಲ್ಲಿ ಜಿಲ್ಲೆ ಪ್ರವೇಶಿಸುವ ಹೆಜಮಾಡಿಯಲ್ಲಾಗಲಿ ಟೋಲ್‌ಗೇಟ್ ಬಳಿ ಇನ್ನೂ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದರು.

ನವಯುಗ ಕಂಪೆನಿ ಸುರತ್ಕಲ್ ಎನ್‌ಐಟಿಕೆಯಿಂದ ಕುಂದಾಪುರದವರೆಗೆ ಬಾಕಿ ಉಳಿದ ಕೆಲಸವನ್ನು ಇನ್ನೂ ಪೂರ್ಣಗೊಳಿಸಿಲ್ಲ. ಪಡುಬಿದ್ರೆಯಲ್ಲಿ ಇನ್ನೂ ಕಾಮಗಾರಿಯೇ ಪ್ರಾರಂಭಗೊಂಡಿಲ್ಲ. ಯೋಜನೆಗಾಗಿ ಸಾಕಷ್ಟು ಮಂದಿ ಸ್ಥಳೀಯರು ತಮ್ಮ ಜಮೀನು ಕಳೆದುಕೊಂಡಿರುವುದಲ್ಲದೇ, ಮಳೆಗಾಲದಲ್ಲಿ ಈಗಲೂ ಹಲವು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತಿದ್ದಾರೆ. ಕಾಮಗಾರಿಯಲ್ಲಾದ ವಿಳಂಬ ಹಾಗೂ ಬೇಜವಾಬ್ದಾರಿತನದಿಂದ ಸಾಕಷ್ಟು ಮಂದಿ ಸ್ಥಳೀಯರು ರಸ್ತೆ ಅಫಘಾತದಿಂದ ಜೀವ ಕಳೆದುಕೊಂಡಿದ್ದಾರೆ ಎಂದರು.

 ತಮ್ಮ ಇತರ ಬೇಡಿಕೆಗಳ ಕುರಿತು ಮಾತನಾಡಿದ ಪ್ರತಾಪ್ ಶೆಟ್ಟಿ, ಜಿಲ್ಲೆಯಲ್ಲಿ ನೋಂದಾಯಿತ -ಕೆಎ20- ವಾಹನಗಳಿಗೆ ಸುಂಕದಿಂದ ವಿನಾಯಿತಿ ನೀಡಬೇಕು. ಅಂಬಲಪಾಡಿ, ಕೋಟ ಮೂರುಕೈ, ಬಸ್ರೂರು ಜಂಕ್ಷನ್ ಹಾಗೂ ಇನ್ನಿತರ ಕಡೆಗಳಲ್ಲಿ ಫ್ಲೈಓವರ್ ನಿರ್ಮಿಸಬೇಕು. ಕಂಪೆನಿ ಜಿಲ್ಲೆಯಲ್ಲಿ ಎಲ್ಲಾ ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸಬೇಕು, ಮಳೆಗಾಲದಲ್ಲಿ ತೀವ್ರ ಸಮಸ್ಯೆಗೆ ಕಾರಣವಾಗುತ್ತಿರುವ ಚರಂಡಿಗಳನ್ನು ಎಲ್ಲಾ ಕಡೆಗಳಲ್ಲಿ ನಿರ್ಮಿಸಬೇಕು, ದಾರಿದೀಪ ವ್ಯವಸ್ಥೆ, ನಿಗದಿತ ಕಡೆಗಳಲ್ಲಿ ಬಸ್ ತಂಗುದಾಣ, ರಿಕ್ಷಾ ನಿಲ್ದಾಣ, ಕೋಟ, ಸಾಲಿಗ್ರಾಮ, ಸಾಸ್ತಾನ, ಬ್ರಹ್ಮಾವರ, ಸಂತೆಕಟ್ಟೆ, ಕಟಪಾಡಿ ಅಲ್ಲದೇ ವಿವಿದೆಡೆಗಳ ಪೇಟೆ ಭಾಗದಲ್ಲಿ ನಿರ್ಮಿಸಿರುವ ಯುಟರ್ನ್ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದವರು ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಮ್ಮ ಈ ಬೇಡಿಕೆಗಳನ್ನು ಈಡೇರಿಸಲು ವಿಫಲವಾದರೆ, ಸಮಿತಿಯು ವಿವಿಧ ಸಂಘಟನೆಗಳ ಸಹಕಾರ ದೊಂದಿಗೆ ಮುಂಬರುವ ದಿನಗಳಲ್ಲಿ ತೀವ್ರವಾದ ಪ್ರತಿಭಟನೆ ನಡೆಸಲಿದೆ ಎಂದವರು ಕಂಪೆನಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಭೆಯನ್ನುದ್ದೇಶಿಸಿಮಾತನಾಡಿದ ಲಾರಿ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ ಸೇರಿದಂತೆ ಉಳಿದ ಪ್ರತಿಭಟನಕಾರರು ಸ್ಥಳೀಯವಾದ ಕೆಎ-20 ನೊಂದಾಯಿತ ವಾಹನಗಳಿಗೆ ಇಲ್ಲಿ ಸುಂಕ ವಿಧಿಸಬಾರದು ಎಂದು ಬಲವಾಗಿ ಪ್ರತಿಪಾದಿಸಿದರು. ಸುರತ್ಕಲ್‌ನಿಂದ ಕುಂದಾಪುರದವರೆಗೆ ಇನ್ನೂ ಶೇ.40ರಷ್ಟು ಕಾಮಗಾರಿ ಬಾಕಿ ಉಳಿದಿರುವುದರಿಂದ ಸಾಸ್ತಾನ ಹಾಗೂ ಹೆಜಮಾಡಿ ಎರಡೂ ಕಡೆಗಳಲ್ಲಿ ಈಗಲೇ ಸುಂಕವನ್ನು ವಸೂಲಿಮಾಡಬಾರದು ಎಂದು ಆಗ್ರಹಿಸಿದರು.

ಪ್ರತಿಭಟನಾ ಸಭೆಯ ಬಳಿಕ ಎಲ್ಲರೂ ಎರಡು ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಘೋಷಣೆಗಳನ್ನು ಕೂಗಿದರು. ಬಳಿಕ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಮೂಲಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಅರ್ಪಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂಗಳ ಅಧ್ಯಕ್ಷರು, ವಿವಿಧ ಸಂಘಟನೆಗಳ ಮುಖಂಡರಾದ ಗೋವಿಂದ ಪೂಜಾರಿ, ಮೋಸೆಸ್ ರಾಡ್ರಿಗಸ್, ರಾಘವೇಂದ್ರ ಕಾಂಚನ್, ರಾಮಕೃಷ್ಣ ಹೇರ್ಳೆ, ವಿಠಲ ಪೂಜಾರಿ, ಕಿಶೋರ್ ಕುಮಾರ್, ಆಲ್ವಿನ್ ಅಂದ್ರಾದೆ, ಸತೀಶ್ ಮುಟ್ಲುಪಾಡಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರವೀಣ್ ಶೆಟ್ಟಿ, ರವಿ ಶೆಟ್ಟಿ, ಕೆಂಚನೂರು ಸೋಮಶೇಖರ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.

‘ಸುಂಕ ವಸೂಲಿ ಸದ್ಯಕ್ಕಿಲ್ಲ’

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಾಸ್ತಾನ ಹಾಗೂ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸುಂಕ ವಸೂಲಾತಿಗೆ ಕಂಪೆನಿಗೆ ಇನ್ನೂ ಯಾವುದೇ ಅನುಮತಿ ದೊರಕದ ಕಾರಣ ಡಿ.2ರಿಂದ ಸುಂಕ ವಸೂಲಾತಿಯ ಯಾವುದೇ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಯೋಜನೆಯ ಗುತ್ತಿಗೆದಾರರಾದ ನವಯುಗ ಕಂಪೆನಿಯ ಇಂಜಿನಿಯರ್ ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ಅವರನ್ನು ಸುದ್ದಿಗಾರರು ಸುಂಕ ವಸೂಲಾತಿಯ ಕುರಿತಂತೆ ಪ್ರಶ್ನಿಸಿದಾಗ, ಇಂಥ ಯಾವ ಪ್ರಸ್ತಾಪ ತಮ್ಮ ಮುಂದಿಲ್ಲ. ಕಂಪೆನಿಯಿಂದ ಪ್ರಸ್ತಾಪವೊಂದು ಪ್ರಾಧಿಕಾರಕ್ಕೆ ಹೋಗಿದ್ದು ಅವರಿಂದ ಯಾವುದೇ ಮಾಹಿತಿ ಬಂದಿಲ್ಲ. ಶೀಘ್ರದಲ್ಲೇ ಅವರಿಂದ ಸೂಚನೆ ದೊರೆಯುವ ನಿರೀಕ್ಷೆ ಇದೆ ಎಂದರು.

ರಾ.ಹೆದ್ದಾರಿ ಪ್ರಾಧಿಕಾರದಿಂದ ಸೂಚನೆ ಬಂದ ಬಳಿಕವೂ ಪತ್ರಿಕೆಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಬೇಕು. ಅನಂತರವಷ್ಟೇ ಸುಂಕ ವಸೂಲಾತಿ ಪ್ರಾರಂಭಗೊಳ್ಳಬಹುದು. ಇದಕ್ಕೆ ಕನಿಷ್ಠ ಒಂದು ತಿಂಗಳಾದರೂ ಬೇಕಾಗುತ್ತದೆ ಎಂದವರು ಹೇಳಿದರು.

ಕಾಮಗಾರಿ ಬಾಕಿ ಇರುವ ಕುರಿತು ಪ್ರಶ್ನಿಸಿದಾಗ, ಭೂಸ್ವಾದೀನ ಪ್ರಕ್ರಿಯೆ ಮುಗಿಯದೇ ಇರುವುದರಿಂದ ಪಡುಬಿದ್ರೆಯಲ್ಲಿ ಕಾಮಗಾರಿ ನಡೆದಿಲ್ಲ. ಉಳಿದಂತೆ ಎಲ್ಲಾ ಕಡೆಗಳಲ್ಲಿ ನಮಗೆ ವಹಿಸಿಕೊಟ್ಟ ಕಾಮಗಾರಿಗಳನ್ನು ಹೆಚ್ಚುಕಡಿಮೆ ಪೂರ್ಣಗೊಳಿಸಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News