×
Ad

ಕಟ್ಟಡ ವಿವಾದ: ಉಡುಪಿ ನಗರಸಭೆಯಲ್ಲಿ ತಾರಕಕ್ಕೇರಿದ ಗದ್ದಲ

Update: 2016-11-30 20:00 IST

ಉಡುಪಿ, ನ.30: ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಇಂದು ನಗರದ ವಿಶ್ವೇಶ್ವರಯ್ಯ ಕಟ್ಟಡಕ್ಕೆ ಸಂಬಂಧಿಸಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಉಂಟಾದ ಗದ್ದಲವು ತಾರಕಕ್ಕೇರಿ ಪರಸ್ಪರ ಕೀಳು ಮಟ್ಟದ ಪದಗಳನ್ನು ಬಳಸಿ ತೊಡೆ ತಟ್ಟಿ ಸವಾಲೆಸೆದು ಸಂಘರ್ಷಕ್ಕೆ ಮುಂದಾದ ಘಟನೆ ನಡೆಯಿತು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯ ಯಶ್ಪಾಲ್ ಸುವರ್ಣ ಮಾತನಾಡಿ, ಕಳೆದ ಸಭೆಯಲ್ಲಿ ವಿಶ್ವೇಶರಯ್ಯ ಕಟ್ಟಡದ ಅಭಿವೃದ್ಧಿಗೆ ಸಂಬಂಧಿಸಿ ನಡೆದ ಟೆಂಡರ್ ಹಾಗೂ ಇತರ ಪ್ರಕ್ರಿಯೆಗಳ ದಾಖಲೆಗಳನ್ನು ಅದೇ ದಿನ ಸಂಜೆ ನೀಡುವುದಾಗಿ ಹೇಳಿದ್ದರೂ ಈವರೆಗೂ ನಮಗೆ ಆ ದಾಖಲೆ ಸಿಕ್ಕಿಲ್ಲ. ದಾಖಲೆಯನ್ನು ನೀಡದೆ ನಾವು ಸಭೆ ನಡೆಸಲು ಅವಕಾಶ ನೀಡಲ್ಲ ಎಂದು ಗುಡುಗಿದರು.

ದಾಖಲೆ ಸಿದ್ಧವಾಗಿಯೇ ಇತ್ತು. ಆದರೆ ಅದನ್ನು ನಾವು ನಿಮ್ಮ ಮನೆಗೆ ತಂದು ಕೊಡಲು ಆಗಲ್ಲ ಎಂದು ಅಧ್ಯಕ್ಷರು ಹೇಳಿದರು. ಇದನ್ನು ವಿರೋಧಿಸಿ ವಿಪಕ್ಷ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಅಧ್ಯಕ್ಷರ ಮುಂದೆ ಜಮಾಯಿಸಿದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಧಿ ಕಾರ ನಡೆಸಲು ಸಾಧ್ಯವಾಗದಿದ್ದರೆ ಕುರ್ಚಿ ಬಿಟ್ಟು ತೊಲಗಿ ಎಂದು ಕಿಡಿ ಕಾರಿದರು. ಇದರಿಂದ ಕುಪಿತಗೊಂಡ ಆಡಳಿತ ಪಕ್ಷದ ಸದಸ್ಯರು ಅಧ್ಯಕ್ಷರನ್ನು ನಿಂದನೆ ಮಾಡುವುದನ್ನು ಖಂಡಿಸಿದರು.

ಇದರಿಂದ ಸದಸ್ಯರುಗಳ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದು ಇಡೀ ಸಭೆ ಗದ್ದಲಮಯವಾಯಿತು. ಈ ಹಿನ್ನೆಲೆಯಲ್ಲಿ ಸಭೆಯನ್ನು 10 ನಿಮಿಷಗಳ ಕಲ ಮುಂದೂಡಲಾಯಿತು. ಆದರೂ ವಿಪಕ್ಷ ಸದಸ್ಯರು ಬಾವಿ ಬಿಟ್ಟು ತೆರಳದೆ ಅಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದರು. ಬಳಿಕ ಪೌರಾಯುಕ್ತ ಡಿ.ಮಂಜುನಾಥಯ್ಯ ದಾಖಲೆ ಗಳನ್ನು ತರಿಸಿ ವಿಪಕ್ಷ ಸದಸ್ಯರುಗಳಿಗೆ ನೀಡಿದರು. ಇದರಿಂದ ಗದ್ದಲ ತಣ್ಣಗಾಯಿತು.

ಉಪಾಧ್ಯಕ್ಷರೇ ಬಾವಿಗಿಳಿದರು

ಇದಾದ ಬಳಿಕ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್ ತನ್ನ ಕುರ್ಚಿಯಿಂದ ಕೆಳಗಿಳಿದು ಬಂದು, ವಾಗ್ವಾದದ ವೇಳೆ ಯಶ್ಪಾಲ್ ಸುವರ್ಣ ಅಧ್ಯಕ್ಷರು ಲಂಚ ಸ್ವೀಕರಿಸಿದ್ದಾರೆಂದು ಮಾಡಿರುವ ಆರೋಪವನ್ನು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಕ್ಷಮೆಯಾಚಿಸಬೇಕು ಎಂದು ಪಟ್ಟಹಿಡಿದರು. ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯರು ಯಶ್ಪಾಲ್ ಸುವರ್ಣ ಕ್ಷಮೆ ಯಾಚನೆಗೆ ಒತ್ತಾಯಿಸಿದರು. ಇದರಿಂದ ಮತ್ತೆ ವಾಗ್ವಾದಗಳು ನಡೆದವು.

‘ಕಳೆದ ಸಭೆಯಲ್ಲಿ ದಾಖಲೆಗಳನ್ನು ಕೇಳಿದಾಗ, ಅವು ಬೆಂಗಳೂರಿಗೆ ಹೋಗಿದೆ ಎಂದು ಹೇಳಲಾಗಿತ್ತು. ಇದೀಗ ಅದು ಮತ್ತ್ತೆ ಹೇಗೆ ಮರಳಿ ಬಂತು. ಇದರ ಅರ್ಥ ಇಡೀ ಅವ್ಯವಹಾರ ನಡೆದಿದೆ ಎಂಬುದು’ ಎಂದು ಯಶ್ಪಾಲ್ ಸುವರ್ಣ ಸ್ಪಷ್ಟಪಡಿಸಿ, ಕ್ಷಮೆಯಾಚನೆಗೆ ನಿರಾಕರಿಸಿದರು. ಮತ್ತೆ ಮುಂದುವರೆದ ಉಪಾಧ್ಯಕ್ಷೆ ಇದನ್ನು ಪ್ರತಿಭಟಿಸಿ ಬಾವಿಗೆ ಇಳಿದು ಧರಣಿ ಕುಳಿತು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಉಪಾ ಕ್ಷರೇ ಬಾವಿಗಿಳಿದು ಧರಣಿ ಕುಳಿತಿರುವುದನ್ನು ವಿಪಕ್ಷ ಸದಸ್ಯರು ‘ಶೇಮ್’ ‘ಶೇಮ್’ ಹೇಳಿ ಕೂಗಿದರು. ಬಳಿಕ ಅಧ್ಯಕ್ಷರೇ ಬಂದು ಉಪಾಧ್ಯಕ್ಷರನ್ನು ಮೇಲೆ ಕರೆದುಕೊಂಡು ಹೋದರು.

ಘರ್ಷಣೆಗೆ ಮುಂದಾದರು

ಸಭೆ ನಡೆಸಲು ಅವಕಾಶ ನೀಡದ ವಿಪಕ್ಷ ಸದಸ್ಯರ ವಿರುದ್ಧ ಅಧ್ಯಕ್ಷರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಮಹಿಳೆ ಯರ ಬಗ್ಗೆ ನಿಮಗೆ ಗೌರವವೇ ಇಲ್ಲ. ಹೀಗಾಗಿ ಮಹಿಳಾ ಅಧ್ಯಕ್ಷರ ಬಗ್ಗೆ ಈ ರೀತಿ ನಿಂದನೆ ಮಾಡುತ್ತೀರಿ’ ಎಂದು ಸೆಲಿನಾ ಕರ್ಕಡ ಕಿಡಿಕಾರಿದರು.

ರಮೇಶ್ ಕಾಂಚನ್ ಮಾತನಾಡಿ, ತಾಕತ್ತಿದ್ದರೆ ಹೊರಗಡೆ ಬನ್ನಿ. ನಿಮ್ಮ ತಾಕತ್ತು ಮಹಿಳಾ ಅಧ್ಯಕ್ಷರ ಬಳಿ ತೋರಿಸಬೇಡಿ. ನಮ್ಮ ಬಳಿ ನಿಮ್ಮ ತಾಕತ್ತು ತೋರಿಸಿ ಎಂದು ಗುಡುಗಿದರು. ಇದರಿಂದ ಕೋಪಗೊಂಡ ದಿನಕರ ಶೆಟ್ಟಿ ಹೆರ್ಗ, ನಾವು ಕೂಡ ಪುರುಷರು, ನಿಮ್ಮ ಸವಾಲು ಸ್ವೀಕರಿಸಲು ಸಿದ್ಧ ಎಂದು ಎದಿರೇಟು ನೀಡಿದರು. ಹೀಗೆ ಮಾತಿಗೆ ಮಾತಿಗೆ ಬೆಳೆದು ಇಬ್ಬರು ಸಂಘರ್ಷಕ್ಕೆ ಮುಂದಾದರು. ಇದರಿಂದ ಇಡೀ ಸಭೆ ಗದ್ದಲಮಯವಾಗಿ ಆತಂಕದ ವಾತಾವರಣ ಸೃಷ್ಠಿ ಯಾಯಿತು. ಕೂಡಲೇ ಎರಡು ಪಕ್ಷದ ಸದಸ್ಯರು ಮಧ್ಯ ಪ್ರವೇಶಿಸಿ ಇಬ್ಬರಿಗೂ ಬುದ್ದಿವಾದ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು. ಇಲ್ಲಿ ಜನಪರ ಚರ್ಚೆ ನಡೆಯಬೇಕೆ ಹೊರತು ವೈಯಕ್ತಿಕ ದ್ವೇಷ ಸರಿಯಲ್ಲ ಎಂದು ಅಧ್ಯಕ್ಷರು ಹೇಳಿದರು.

ತಳ್ಳುಗಾಡಿ, ವಾಹನ ನಿಷೇಧ

ತಳ್ಳುಗಾಡಿ ಹಾಗೂ ನೋಪಾರ್ಕಿಂಗ್ ವಲಯದ ಕುರಿತು ರಮೇಶ್ ಕಾಂಚನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತ ಡಿ.ಮಂಜುನಾಥಯ್ಯ, ತಳ್ಳುಗಾಡಿ ಮತ್ತು ವಾಹನ ಸಂಚಾರ ವನ್ನು ನಿಷೇಧಿಸಿ ಕೆಲವು ಸ್ಥಳಗಳನ್ನು ಗುರುತಿಸಿ ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ. ಈ ಸಂಬಂಧ ಸಂಚಾರಿ ಪೊಲೀಸರ ಸಮ್ಮುಖದಲ್ಲಿ 15 ಬೋರ್ಡ್‌ಗಳನ್ನು ಆಯಾ ಸ್ಥಳಗಳಲ್ಲಿ ಆಳವಡಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದರು.

ಈ ಬಾರಿ ಮಳೆ ಕಡಿಮೆ ಬಂದಿರುವುದರಿಂದ ಮುಂದೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ನಗರದಲ್ಲಿರುವ ಬಾವಿಗಳನ್ನು ದುರಸ್ತಿ ಮಾಡುವಂತೆ ಹರೀಶ್ ರಾಂ ಸಭೆಯಲ್ಲಿ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಬಜೆ ಡ್ಯಾಮ್‌ನಲ್ಲಿ 30 ಎಂಎಲ್‌ಡಿ ನೀರಿದ್ದು, 23-24 ಎಂಎಲ್‌ಡಿ ನೀರಿನ ಪೂರೈಕೆ ಆಗುತ್ತಿದೆ. ನಗರದಲ್ಲಿರುವ ಕೊಳವೆ ಹಾಗೂ ತೆರೆದ ಬಾವಿಯನ್ನು ಈಗಾಗಲೇ ಗುರುತಿಸಲಾಗಿದ್ದು, ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಚುನಾವಣೆ ಎದುರಿಸಲು ಸವಾಲು!

ಸಭೆಯಲ್ಲಿ ವಾಗ್ವಾದ ನಡೆಯುತ್ತಿದ್ದ ಸಂದರ್ಭ ‘ಸದಸ್ಯರುಗಳಿಗೆಯೇ ಸರಿ ಯಾಗಿ ಮಾಹಿತಿ ಕೊಡದವರು, ಇನ್ನು ಜನರಿಗೆ ಹೇಗೆ ಆಡಳಿತ ಕೊಡ ಬಹುದು.’ ಎಂದು ವಿಪಕ್ಷ ಸದಸ್ಯರು ಟೀಕಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ರಮೇಶ್ ಕಾಂಚನ್, ಅದಕ್ಕಾಗಿಯೇ ಜನರು ನಮಗೆ ಅಧಿಕಾರ ನೀಡಿ, ನಿಮ್ಮನ್ನು ಅಲ್ಲಿ ಕೂರಿಸಿದ್ದು ಎಂದರು.

ಹಾಗಾದರೆ ಈಗ ಚುನಾವಣೆಗೆ ಬನ್ನಿ, ಆಗ ಗೊತ್ತಾಗುತ್ತೆ ನಿಮ್ಮ ಹಣೆ ಬರಹ ಎಂದು ನವೀನ್ ಭಂಡಾರಿ ಹೇಳಿದರು. 35 ಸದಸ್ಯರೂ ರಾಜೀ ನಾಮೆ ನೀಡಿ ಚುನಾವಣೆ ಎದುರಿಸುವ ಎಂದು ದಿನಕರ ಶೆಟ್ಟಿ ಸವಾಲು ಹಾಕಿದರು. ನಾವು ಇದಕ್ಕೆ ಸಿದ್ಧರಿದ್ದೇವೆ ಎಂದು ರಮೇಶ್ ಕಾಂಚನ್ ಸವಾಲು ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News