ಕಲೆಯ ಮೂಲಕ ಕಾಯಿಲೆಗಳ ಬಗ್ಗೆ ಶಿಕ್ಷಣ ಅಗತ್ಯ: ಪೇಜಾವರ ಶ್ರೀ

Update: 2016-11-30 15:01 GMT

ಉಡುಪಿ, ನ.30: ಎಚ್‌ಐವಿ ಕಾಯಿಲೆ ನಿವಾರಣೆಗಿಂತಲೂ ಬಾರದಂತೆ ಎಚ್ಚರ ವಹಿಸುವುದು ಅತಿ ಅವಶ್ಯಕ. ಆದುದರಿಂದ ಇದರ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಕಾರ್ಯ ಆಗಬೇಕಾಗಿದೆ. ಯಕ್ಷಗಾನದಂತಹ ಕಲೆಯ ಮೂಲಕ ರೋಗ ನಿಯಂತ್ರಣದ ಅರಿವು ಮೂಡಿಸುವುದರಿಂದ ಹೆಚ್ಚು ಪರಿ ಣಾಮಕಾರಿಯಾಗಿ ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಪರ್ಯಾಯ ಪೇಜಾವರ ಮಠ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಬೆಂಗಳೂರು ಶ್ರೀ ಕಲಾದರ್ಶಿನಿ ಯಕ್ಷಗಾನ ಮಂಡಳಿಯಿಂದ ಬುಧವಾರ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾದ ಏಡ್ಸ್ ಕುರಿತು ಅರಿವು ಮೂಡಿಸುವ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರೋಹಿಣಿ ಮಾತನಾಡಿ, ಎಚ್‌ಐವಿ ಪೀಡಿತರನ್ನು ಸಮಾಜದಿಂದ ದೂರ ಇಡುವ ಬದಲು ಅವರು ಕೂಡ ನಮ್ಮಂತೆ ಮನುಷ್ಯರು ಎಂಬ ಮನೋಭಾವದಿಂದ ಕಾಣಬೇಕಾಗಿದೆ. ಅವರ ಬಗ್ಗೆ ಸಕಾರಾತ್ಮಕವಾಗಿ ಚಿಂತನೆ ಮಾಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯ ಎಂದರು.

ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಐಎಂಎ ಕರಾವಳಿ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಮುರಳೀಧರ್ ಪಾಟೀಲ್, ರೆಡ್‌ಕ್ರಾಸ್ ಉಡುಪಿ ಕಾರ್ಯದರ್ಶಿ ಡಾ. ಅಶೋಕ್ ಕುಮಾರ್ ವೈ. ಉಪಸ್ಥಿತರಿದ್ದರು. ಡಾ.ಅರವಿಂದ ನಾಯಕ್ ಅಮ್ಮುಂಜೆ ಸ್ವಾಗತಿಸಿ ಕಾರ್ಯಕ್ರಮ ನಿರೂ ಪಿಸಿದರು. ಕೋಶಾಧಿಕಾರಿ ಜಿ.ಸಿ.ಜನಾರ್ದನ್ ವಂದಿಸಿದರು. ಬಳಿಕ ಯಕ್ಷ ಗಾನ ಪ್ರದರ್ಶನ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News