344 ನಿಗದಿತ ಡೋಸ್ ಮಿಶ್ರಣ ಔಷಧ ನಿಷೇಧ ದಿಲ್ಲಿ ಹೈಕೋರ್ಟ್‌ನಿಂದ ರದ್ದು

Update: 2016-12-01 17:08 GMT

ಹೊಸದಿಲ್ಲಿ, ಡಿ.1: ಕೋರೆಕ್ಸ್ ಕೆಮ್ಮಿನ ಸಿರಪ್, ವಿಕ್ಸ್ ಆ್ಯಕ್ಷನ್-500 ಎಕ್ಸ್‌ಟ್ರಾ ಹಾಗೂ ಹಲವು ಡಯಾಬಿಟಿಸ್ ವಿರೋಧಿ ಔಷಧಗಳ ಸಹಿತ 344 ನಿಗದಿತ ಡೋಸ್ ಮಿಶ್ರಣ (ಎಫ್‌ಡಿಸಿ) ಔಷಧಿಗಳನ್ನು ನಿಷೇಧಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಗುರುವಾರ ರದ್ದುಪಡಿಸುವ ಮೂಲಕ ದಿಲ್ಲಿ ಹೈಕೋರ್ಟ್ ಸರಕಾರಕ್ಕೆ ಆಘಾತವೊಂದನ್ನು ನೀಡಿದೆ. ಈ ಕ್ರಮವನ್ನು ಸರಕಾರ ಆಕಸ್ಮಿಕವಾಗಿ ಕೈಗೊಂಡಿದೆಯೆಂದು ಅದು ಹೇಳಿದೆ.

ಎಫ್‌ಡಿಸಿಗಳನ್ನು ನಿಷೇಧಿಸಿ ಸರಕಾರವು ಮಾ.10ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ, ಫಿಝರ್, ಗ್ಲೆನ್ಮಾರ್ಕ್, ಗ್ಯಾಂಬಲ್ ಹಾಗೂ ಸಿಪ್ಲಾದಂತಹ ಹಲವು ಔಷಧಿ ಹಾಗೂ ಆರೋಗ್ಯ ನಿಗಾ ದೈತ್ಯರು 454 ಅರ್ಜಿಗಳನ್ನು ಸಲ್ಲಿಸಿದ್ದರು.

ಸರಕಾರವು ಔಷಧಿ ಹಾಗೂ ಸುಗಂಧದ್ರವ್ಯ ಕಾಯ್ದೆಯಲ್ಲಿ ಸೂಚಿಸಲಾಗಿರುವ ಪ್ರಕ್ರಿಯೆಗಳನ್ನು ಅನುಸರಿಸದೆಯೇ ಈ ನಿರ್ಧಾರ ಕೈಗೊಂಡಿದೆಯೆಂದು ನ್ಯಾಯಮೂರ್ತಿ ರಾಜೀವ್ ಸಹಾಯ್ ಎಂಡ್ಲಾ ಅಭಿಪ್ರಾಯಿಸಿದ್ದಾರೆ.

ಹಲವು ಪ್ರಮುಖ ಕಂಪೆನಿಗಳ ಔಷಧಿಗಳ ಕುರಿತಾದ ಕೇಂದ್ರ ಸರಕಾರದ ನಿರ್ಧಾರದ ಜಾರಿಯನ್ನು ಹೈಕೋರ್ಟ್ ಮಾ.14ರ ಬಳಿಕ ತಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News