ಗೋಧಿ ಬಣ್ಣ ತಂಡದಿಂದ ಕಾಮಿಡಿ ಚಿತ್ರ

Update: 2016-12-02 14:22 GMT

‘ನೋಗ್‌ರಾಜ್ ..ತಮ್ ಎಲ್ಲರಿಗೂ ನಮಸ್ಕಾರ’ ಈ ಶೀರ್ಷಿಕೆಯನ್ನು ಕೇಳಿದಾಗ ಯೂಟ್ಯೂಬ್, ಫೇಸ್‌ಬುಕ್‌ಗಳನ್ನು ಜಾಲಾಡುವ ಕನ್ನಡಿಗರ ಮುಖದಲ್ಲಿ ಕಿರುನಗೆ ಮೂಡುವುದಂತೂ ಖಂಡಿತ. ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ತುಂಟತನದ ಚಿಂತನೆಗಳು ಹಾಗೂ ಪಂಚಿಂಗ್ ಡೈಲಾಗ್‌ಗಳ ಮೂಲಕ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ನೋಗ್‌ರಾಜ್ ಎಂಬ ಪುಡಾರಿ ರಾಜಕಾರಣಿಯ ಪಾತ್ರವು ಈಗ ಸ್ಯಾಂಡಲ್‌ವುಡ್ ಪ್ರವೇಶಿಸಲಿದೆ.

ಹೌದು. ‘ಗೋಧಿ-ಬಣ್ಣ ಸಾಧಾರಣ ಮೈಕಟ್ಟು’ವಿನಂತಹ ಅದ್ಭುತ ಚಿತ್ರವನ್ನು ನೀಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಹಾಗೂ ನಿರ್ದೇಶಕ ಹೇಮಂತ್ ರಾವ್ ಈ ನೋಗ್‌ರಾಜ್‌ನನ್ನು ಸ್ಯಾಂಡಲ್‌ವುಡ್‌ಗೆ ಕರೆತರುತ್ತಿದ್ದಾರೆ. ಇವರಿಬ್ಬರೂ ಜಂಟಿಯಾಗಿ ‘ನೋಗ್‌ರಾಜ್ ..ತಮ್ ಎಲ್ಲರಿಗೂ ನಮಸ್ಕಾರ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಯೂಟ್ಯೂಬ್‌ನಲ್ಲಿ ಜನಪ್ರಿಯವಾಗಿರುವ ಈ ನೋಗ್‌ರಾಜ್ ಪಾತ್ರವನ್ನು ಬೆಂಗಳೂರಿನ ಖ್ಯಾತ ಆರ್‌ಜೆ, ಟಿವಿ ನಿರೂಪಕ ಹಾಗೂ ನಟ ದಾನಿಶ್ ಸೇಠ್ ನಿರ್ವಹಿಸುತ್ತಾ ಬಂದಿದ್ದಾರೆ. ಅವರೇ ಈಗ ಸಿನೆಮಾದಲ್ಲೂ ನೋಗ್‌ರಾಜ್ ಪಾತ್ರದಲ್ಲಿ ನಟಿಸಲಿದ್ದಾರೆ.

ನೋಗ್‌ರಾಜ್ ಸರಣಿಯ ವೀಡಿಯೊಗಳ ನಿರ್ದೇಶಕ ಸಾದ್‌ಖಾನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಾಗೆ ನೋಡಿದರೆ ಸಾದ್‌ಖಾನ್ ಚಿತ್ರರಂಗಕ್ಕೆ ಹೊಸಬರೇನಲ್ಲ. 2014ರಲ್ಲಿ ಅವರು ‘ಸ್ಟೇಶನ್’ ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದರು. ಬೆಂಗಳೂ ರಿನಲ್ಲಿ ತಯಾ ರಾದ ಪ್ರಪ್ರಥಮ ಹಿಂದಿ ಚಿತ್ರವೆಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿತ್ತು.

‘ನೋಗ್‌ರಾಜ್ ..ತಮ್ ಎಲ್ಲರಿಗೂ ನಮಸ್ಕಾರ’ ಚಿತ್ರವು ಕನ್ನಡ-ಇಂಗ್ಲಿಷ್ ಭಾಷೆಗಳ ಸಮ್ಮಿಶ್ರಣವಾಗಿದೆ. ಚಿತ್ರದ ಕಥೆ-ಚಿತ್ರಕಥೆಯನ್ನು ಸಾದ್‌ಖಾನ್, ದಾನಿಶ್ ಸೇಠ್ ಹಾಗೂ ಮಾಝ್ ಖಾನ್ ಜಂಟಿಯಾಗಿ ಬರೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇದೊಂದು ವಿಭಿನ್ನ ಪ್ರಯತ್ನವಾಗಲಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆಯೆಂದು ಎಂದು ಸಹ ನಿರ್ಮಾಪಕ ಹೇಮಂತ್ ರಾವ್ ಭರವಸೆ ಬೇರೆ ನೀಡಿದ್ದಾರೆ. ಚಿತ್ರದ ಶೂಟಿಂಗ್ 2017ರ ಜನವರಿಯಲ್ಲಿ ಆರಂಭವಾಗುವುದಾಗಿಯೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News