ಕೆಎಸ್ಸಾರ್ಟಿಸಿ ಬಸ್ ಸಿಬ್ಬಂದಿಯ ಮೇಲೆ ಹಲ್ಲೆ: ಒಂಬತ್ತು ವಿದ್ಯಾರ್ಥಿಗಳು ವಶಕ್ಕೆ
ಪಡುಬಿದ್ರೆ, ಡಿ.3: ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳ ತಂಡವೊಂದು ಕೆಎಸ್ಸಾರ್ಟಿಸಿ ಬಸ್ಸನ್ನು ತಡೆದು ಚಾಲಕ, ಸಹಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರ ಮುಂಜಾನೆ ಪಡುಬಿದ್ರಿಯಲ್ಲಿ ನಡೆದಿದೆ.
ಬಸ್ ಚಾಲಕ ಗಿರಿಶ್ ಬಾಬು, ಸಹಚಾಲಕ ವಿಠಪ್ಪ, ನಿರ್ವಾಹಕ ನಾಗರಾಜ್ ಎಂಬವರುಪ ಹಲ್ಲೆಗೊಳಗಾದವರಾಗಿದ್ದಾರೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡು ಸುದ್ದಿಯಾಗಿದ್ದ ಡಿವೈಎಸ್ಪಿ ಗಣಪತಿ ಅವರ ಪುತ್ರ ನೇಹಲ್, ಜೋಗಿಯಲ್, ಚಿಂತನ್, ಹಿತೇಶ್, ತನಿಷ್, ಕೌರವ್, ಕೌಶಿಕ್, ಆದಿ, ಅತೀಶ್ ಎಂಬವರು ಸೇರಿದಂತೆ ಹಲ್ಲೆ ನಡೆಸಿದ ಆರೋಪಿಗಳಾದ ಒಂಬತ್ತು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
*ಘಟನೆಯ ವಿವರ: ಬೆಂಗಳೂರಿನಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸನ್ನು ಇಂದು ಮುಂಜಾನೆ ಸುಮಾರು 4:30ರರ ವೇಳೆಗೆ ಸುರತ್ಕಲ್ ಸಮೀಪದ ಮುಕ್ಕಾದಿಂದ ವಿದ್ಯಾರ್ಥಿಗಳ ತಂಡ ಫಾಲೋ ಮಾಡಿದೆ ಎಂದು ಹೇಳಲಾಗಿದೆ. ಈ ತಂಡವು ಅಡ್ಡಾದಿಡ್ಡಿಯಾಗಿ ನಾಲ್ಕೈದು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದು, ಈ ವೇಳೆ ಚಾಲಕರನ್ನು ಕೈಸನ್ನೆ ಮಾಡಿ ಬಾಟಲಿ ಪ್ರದರ್ಶಿಸುತ್ತಾ ಬೆದರಿಸುತ್ತಿತ್ತೆನ್ನಲಾಗಿದೆ. ಪಡುಬಿದ್ರೆಯ ಭವ್ಯಾ ಪೆಟ್ರೋಲ್ ಬಂಕ್ ಮುಂದೆ ಬಸ್ಸನ್ನು ತಡೆದ ತಂಡ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿ ಹಲ್ಲೆ ನಡೆಸಿತೆನ್ನಲಾಗಿದೆ. ತಡೆಯಲು ಬಂದ ಸಹಚಾಲಕ ವಿಠಪ್ಪಮತ್ತು ನಿರ್ವಾಹಕ ನಾಗರಾಜ್ ಮೇಲೆಯೂ ಹಲ್ಲೆ ನಡೆಸಿ ಅವರಲ್ಲಿದ್ದ ಹಣವನ್ನು ದೋಚಿರುವುದಾಗಿ ಎಂದು ಚಾಲಕ ಗಿರೀಶ್ ಬಾಬು ದೂರಿದ್ದಾರೆ.