ಕಾಳಧನದಲ್ಲಿ ಉಲ್ಲೇಖಿತ ‘ಬಿಗ್‌ಬಾಸ್’ ಮುಖ್ಯಮಂತ್ರಿಯೇ?

Update: 2016-12-03 11:10 GMT

ಮಂಗಳೂರು, ಡಿ.3: ಅಧಿಕಾರಿಗಳಿಬ್ಬರ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಕಾಳಧನ ಸಿಕ್ಕಿರುವುದು ರಾಜ್ಯದ ಇತಿಹಾಸದಲ್ಲಿ ಕರಾಳ ದಿನ ಎಂದು ಹೇಳಬಹುದು. ಇದರಲ್ಲಿ ಈ ಹಣಕ್ಕೆ ಸಂಬಂಧಿಸಿ ಕೋರ್ಡ್‌ವರ್ಡ್ ಮೂಲಕ ‘ಬಿಗ್‌ಬಾಸ್’ ಎಂದು ಬರೆದಿರುವುದು ಪತ್ತೆಯಾಗಿದ್ದು, ಇದು ಯಾರನ್ನು ಉಲ್ಲೇಖಿಸಿ ಬರೆದಿದ್ದು? ಅದು ಮುಖ್ಯಮಂತ್ರಿಯವರೇ ಎಂದು ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ವರದಿ ಮಾಡಿರುವಂತೆ ಕೋಡ್‌ವರ್ಡ್‌ನಲ್ಲಿ ಉಲ್ಲೇಖಿಸಿರುವವರ ಪೈಕಿ ಓರ್ವ ಸಚಿವ ಮಹದೇವಪ್ಪ. ಆದರೆ ಉಳಿದಿಬ್ಬರು ಯಾರು? ಅದರಲ್ಲಿ ಮುಖ್ಯಮಂತ್ರಿ ಸೇರಿದ್ದಾರೆಯೇ ಎಂದು ಜನ ಸಂಶಯಿಸುತ್ತಿದ್ದಾರೆ ಎಂದು ಪೂಜಾರಿ ಹೇಳಿದರು.

ಮುಖ್ಯಮಂತ್ರಿಯ ಮೇಲೆ ಆಕ್ರೋಶ ಮುಂದುವರಿಸಿದ ಪೂಜಾರಿ, ಸಿದ್ದರಾಮಯ್ಯರ ಮೇಲೆ ಜನರು ಸಂಶಯಪಡುವಂತಾಗಿದೆ. ನಾಲ್ವರು ಅಧಿಕಾರಿಗಳಿಂದ ಪತ್ತೆಹಚ್ಚಲಾಗಿರುವ 152 ಕೋ.ರೂ.ನಲ್ಲಿ ಕಾಳಧನ ಎಷ್ಟು ಎಂಬುದನ್ನು ಇಂದು ಸಂಜೆಯೊಳಗೆ ಬಹಿರಂಗಪಡಿಸಬೇಕು. ಅದಕ್ಕೆ ಮುಂದಾಗದಿದ್ದಲ್ಲಿ ಮುಖ್ಯಮಂತ್ರಿ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಹಣದಲ್ಲಿ ಪಕ್ಷದ ವರಿಷ್ಠರಿಗೂ ಪಾಲು ಇರುವ ಬಗ್ಗೆ ಸಂಶಯಕ್ಕೆ ಎಡೆಮಾಡಕೊಟ್ಟಂತಾಗುತ್ತದೆ ಎಂದರು. ನೈಸ್ ಅಕ್ರಮಗಳ ಬಗ್ಗೆ ಕ್ರಮಕ್ಕೆ ಸರಕಾರ ಏಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದ ಜನಾರ್ದನ ಪೂಜಾರಿ, ಅಶೋಕ್ ಖೇಣಿ ಶಾಸಕರೆಂಬ ಭಯ ಬಿಟ್ಟು ಅವರನ್ನು ಬಂಧಿಸಿ ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರದ ವಿರುದ್ಧವೂ ಹರಿಹಾಯ್ದ ಪೂಜಾರಿ, ಸಿಬಿಐ ಇವತ್ತು ಬಿಜೆಪಿಯ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಆಗಿದೆ ಎಂದು ಟೀಕಿಸಿದರು. ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇನೆಯ ಬಗ್ಗೆ ನೀಡಿರುವ ಹೇಳಿಕೆ ಸರಿಯಾಗಿಯೇ ಇದೆ. ಸೇನೆಯನ್ನು ಕೇಂದ್ರ ಸರಕಾರ ದುರ್ಬಲಗೊಳಿಸಿದೆ. ರಕ್ಷಣಾ ಸಚಿವರು ಬಿಜೆಪಿಯನ್ನು ರಕ್ಷಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಸರಕಾರದ ವಿರುದ್ಧ ಮಾತನಾಡುತ್ತಿರುವ ಕಾರಣಕ್ಕೆ ಮಮತಾ ಬ್ಯಾನರ್ಜಿಯವರ ವಿರುದ್ಧ ಕೇಂದ್ರ ಸರಕಾರ ಸಂಚು ಹೂಡುತ್ತಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News