ವಿಕಲಚೇತನರ ಬಗ್ಗೆ ಅನುಕಂಪ ಬೇಡ, ಅವಕಾಶ ಕೊಡಿ: ಡಾ. ಎಂ.ಆರ್.ರವಿ

Update: 2016-12-03 08:02 GMT

ಮಂಗಳೂರು, ಡಿ.3: ವಿಕಲಚೇತನರ ಬಗ್ಗೆ ಯಾವತ್ತೂ ಅನುಕಂಪ ತೋರಿಸುವುದು ಬೇಡ. ತಾತ್ಸಾರದಿಂದ ಕಾಣುವುದೂ ಬೇಡ. ಅವರ ಸಾಮರ್ಥ್ಯವನ್ನು ಬೆಳಕಿಗೆ ತರಲು ಅವಕಾಶಗಳನ್ನು ಮಾಡಿಕೊಡಿ. ಅವರ ಹಕ್ಕುಗಳ ಬಗ್ಗೆ ಮಾಹಿತಿ ನೀಡಿ ಅದನ್ನು ಅವರು ಬಳಸಿಕೊಳ್ಳುವಂತೆ ಮಾಡಿ ಎಂದು ದ.ಕ. ಜಿಪಂ ಸಿಇಒ ಡಾ. ಎಂ.ಆರ್.ರವಿ ಕರೆ ನೀಡಿದರು.

ದ.ಕ. ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಕ್ಲಬ್ ಗಾಂಧಿ ಹಾಗೂ ವಿಕಲಚೇತನರಿಗಾಗಿ ಶ್ರಮಿಸುವ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಪುರಭವನದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ವಿಕಲಚೇತನರಲ್ಲಿ ವಿವಿಧ ವಿಷಯದಲ್ಲಿ ಸಾಧಿಸುವ ಛಲವಿದೆ, ಸಾಮರ್ಥ್ಯವೂ ಇದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಆವಾಗ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಅವರ ಮಾನಸಿಕ ಮತ್ತು ದೈಹಿಕ ಊನತೆ ಯಾವತ್ತೂ ಸಾಧನೆಗೆ ಅಡ್ಡಿಯಾಗಬಾರದು ಎಂದ ಡಾ.ಎಂ.ಆರ್.ರವಿ, ಎಲ್ಲ ಸರಿ ಇದ್ದೂ ಕೂಡ ಮನದೊಳಗೆ ಸಣ್ಣತನ ತೋರುವ ನಾವೇ ವಿಕಲಚೇತನರು ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಮಲ್ಲನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಕುಮಾರ್, ಜಿಪಂ ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ಇಲಾಖಾಧಿಕಾರಿಗಳಾದ ಉಸ್ಮಾನ್, ನಟರಾಜ್, ಶೋಭಾ ಪಿ., ಡಾ.ಮುರಳೀಧರ ನಾಯ್ಕ, ದಿನೇಶ್ ಶೆಟ್ಟಿ, ಲಯನ್ಸ್ ಕ್ಲಬ್‌ನ ಎಂಜೆಎಫ್ ದೇವದಾಸ್ ಭಂಡಾರಿ, ಲೋಕೇಶ್ ಬೋಳಾರ್, ಜಾನ್ ಡಿಸಿಲ್ವ, ಗಣೇಶ್ ಶೆಟ್ಟಿ, ಉದ್ಯಮಿ ಡಾ. ಮನೋಹರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಆಕಾಶವಾಣಿ ಕಲಾವಿದೆ ಕಸ್ತೂರಿ ನಾಡಗೀತೆ ಹಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು. ವಸಂತ ಕುಮಾರ್ ಶೆಟ್ಟಿ ಮತ್ತು ಸುಮಾ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು.

*ವಿಕಲಚೇತನರು ಸಾಮಾಜಿಕ ಅರಿವಿಗಾಗಿ ಹಮ್ಮಿಕೊಂಡ ಪಥ ಸಂಚಲನವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.

*ವಿಕಲಚೇತನರ ಕಲ್ಯಾಣಕ್ಕಾಗಿ ವಿಶೇಷ ಸೇವೆ ಸಲ್ಲಿಸಿದ 17 ಮಂದಿಯನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News