ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಎಸ್‌ಡಿಪಿಐಯಿಂದ ಉಪವಾಸ ಸತ್ಯಾಗ್ರಹ

Update: 2016-12-03 09:06 GMT

ಉಡುಪಿ, ಡಿ.3: ಅಲ್ಪಸಂಖ್ಯಾತರ ವಿರೋಧಿ ನೀತಿಗಳನ್ನು ತಡೆಗಟ್ಟುವ ಹಾಗೂ ಹಕ್ಕುಗಳ ಬಗ್ಗೆ ಜನಜಾಗೃತಿ ಮೂಡಿಸುವ ಮತ್ತು ಸರಕಾರ ಘೋಷಣೆ ಮಾಡಿರುವ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಶನಿವಾರ ಬೆಳಗ್ಗೆಯಿಂದ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದೆ.

ಸರಕಾರ 2017-18ನೆ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ಕಡ್ಡಾಯವಾಗಿ ಮೀಸಡಿಸಬೇಕು. ಜಸ್ಟಿಸ್ ರಂಗ ನಾಥ್ ಮಿಶ್ರಾ ಆಯೋಗದ ವರದಿಯ ಶಿಫಾರಸ್ಸಿನಂತೆ ರಾಜ್ಯದಲ್ಲಿ ಅಲ್ಪ ಸಂಖ್ಯಾತರಿಗೆ ಶೇ.15ರಷ್ಟು ಮತ್ತು ಆ ಪೈಕಿ ಮುಸ್ಲಿಮರಿಗೆ ಶೇ.10ರಷ್ಟು ಮೀಸ ಲಾತಿಯನ್ನು ನೀಡಬೇಕು. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಮತ್ತು ಪ್ರತಿ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ವಸತಿ ಪದವಿ ಕಾಲೇಜು ಮತ್ತು ಅಲ್ಪಸಂಖ್ಯಾತ ಮಾದರಿ ವಸತಿ ಶಾಲೆಯನ್ನು ಸ್ಥಾಪಿಸಬೇಕು.

ಅಲ್ಪಸಂಖ್ಯಾತರ ವರ್ಗದವರು ಹೆಚ್ಚಾಗಿ ಸರಕಾರಿ ಶಾಲೆಗಳನ್ನು ಅವಲಂಬಿಸಿದ್ದು, 2016ರ ಎಸೆಸೆಲ್ಸಿ ಫಲಿತಾಂಶದ ಪ್ರಕಾರ ಶೇ.27.47ರಷ್ಟು ಮುಸ್ಲಿಮ್ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಆದುದರಿಂದ ಸರಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಪರೀಕ್ಷಾ ಪೂರ್ವ ವಿಶೇಷ ತರಬೇತಿಗಳನ್ನು ಹಮ್ಮಿಕೊಳ್ಳಬೇಕು. ಖಾಸಗಿ ವಲಯದಲ್ಲೂ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಜಾರಿಗೊಳಿಸಬೇಕು ಮತ್ತು ಪ್ರತಿ ಹೋಬಳಿ ಮಟ್ಟದಲ್ಲಿ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಅಲ್ಪ ಸಂಖ್ಯಾತ ಮಹಿಳಾ ಉದ್ಯೋಗಿಗಳಿಗೆ ಹಾಸ್ಟೆಲ್‌ಗಳನ್ನು ಪ್ರತಿ ಜಿಲ್ಲೆಗಳಲ್ಲಿ ಪ್ರಾರಂಭಿಸಬೇಕು. ಯುಪಿಎ ಸರಕಾರ ಜಾರಿಗೆ ತರಲು ಉದ್ದೇಶಿಸಿದ್ದ ಕೋಮುಗಲಭೆ ನಿಯಂತ್ರಣ ಮಸೂದೆ 2005ನ್ನು ರಾಜ್ಯದಲ್ಲಿ ಜಾರಿಗೆ ತರಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ.

ಧರಣಿನಿರತರನ್ನುದ್ದೇಶಿಸಿ ಎಸ್‌ಡಿಪಿಐ ದ.ಕ. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿದರು. ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಮಂಚಿ, ಉಡುಪಿ ಜಿಲ್ಲಾ ಉಪಾಧ್ಯಕ್ಷ ಸಾಧಿಕ್ ಉಡುಪಿ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮಲ್ಪೆ, ಕಾರ್ಯದರ್ಶಿ ಇಲ್ಯಾಸ್‌ ಸಾಸ್ತಾನ, ಉಡುಪಿ ಕ್ಷೇತ್ರ ಅಧ್ಯಕ್ಷ ನಝೀರ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News